ಲೋಕ ಅದಾಲತ್‍ನಲ್ಲಿ ಮತ್ತೆ ಒಂದಾದ ಜೋಡಿಗಳು

ಲೋಕ ಅದಾಲತ್‍ನಲ್ಲಿ ಮತ್ತೆ ಒಂದಾದ ಜೋಡಿಗಳು

ದಾವಣಗೆರೆ, ಮಾ.17 – ರಾಷ್ಟ್ರೀಯ ಲೋಕ ಅದಾಲತ್ ಮೂಲಕ ರಾಜೀ ಸಂಧಾನದಡಿ ಜಿಲ್ಲೆಯಲ್ಲಿ 4,000 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.

ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‍ನಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಕಂಡು ವಿಚ್ಚೇದನ ಪಡೆಯುವ ಹಂತಕ್ಕೆ ತಲುಪಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ದಂಪತಿಗಳಲ್ಲಿ 7 ದಂಪತಿಗಳು ಕಳೆದ 4 ವರ್ಷದಿಂದ ನ್ಯಾಯಾಲಯಕ್ಕೆ ವಿಚ್ಚೇದನಕ್ಕಾಗಿ ಅಲೆದಾಡುತ್ತಿದ್ದರು. ಇವರಲ್ಲಿ ಪರಶುರಾಮ ಕೋಂ ಇಂದಿರಾ, ಇವರು ಮಾರ್ಚ್ 16 ರಂದು ನಡೆದ ಲೋಕ ಅದಾಲತ್‍ನಲ್ಲಿ ಒಂದಾಗಿದ್ದಾರೆ. 

ವೀರೇಶ್ ಕೋಂ ಪೂಜಾ, ಇವರು 2 ವರ್ಷದಿಂದ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು, ಈಗ ಲೋಕ ಅದಾಲತ್‍ನಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಪ್ರೀತಂ ಕೋಂ ಚಂದನ್, ಮಂಜುನಾಥ ಕೋಂ ಕಲ್ಪನ, ಸಂದೀಪ ಕೋಂ ವಿಶಾಲ ಲೋಕ ಅದಾಲತ್‍ನಲ್ಲಿ ಒಂದಾಗಿದ್ದಾರೆ. 

ಲೋಕ ಅದಾಲತ್‍ನಲ್ಲಿ ಇನ್ನೂ 1000 ಪ್ರಕರಣಗಳು ರಾಜೀಯಾಗಬಹುದು. ಲೋಕ ಅದಾಲತ್ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನಗಳಲ್ಲಿ ಒಂದು. ವ್ಯಾಜ್ಯ ಪೂರ್ವ ಹಂತದಲ್ಲಿ ಬಾಕಿ ಇರುವ ವಿವಾದಗಳು, ಪ್ರಕರಣ ಗಳನ್ನು ಇತ್ಯರ್ಥಪಡಿಸುವ ವೇದಿಕೆಯಾಗಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ, ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ದಶರಥ ಬಿ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರವೀಣ್‌ ಕುಮಾರ್, ಪೋಕ್ಸೋ ನ್ಯಾಯಾಧೀಶರಾದ ಶ್ರೀಪಾದ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್.ಅರುಣಕುಮಾರ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!