ದಾವಣಗೆರೆ, ಮಾ.15- ರಾಷ್ಟ್ರೀಯ ಹೆದ್ದಾರಿ ಬಳಿಯ ಸರ್ಕ್ಯೂಟ್ ಹೌಸ್ ಪಕ್ಕದ ಒಂದು ಎಕರೆ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಿಡುತ್ತೇವೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಇತ್ತೀಚೆಗೆ ಪ.ಜಾತಿ ಮತ್ತು ಪ.ಪಂಗಡದವರ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರ ಮತ್ತು ಸಾರ್ವಜನಿಕರ ಅಹವಾಲು ಆಲಿಸಿ ಅವರು ಮಾತನಾಡಿದರು.
ದಲಿತ ಮುಖಂಡರು ನಗರದ ಮಧ್ಯೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗದ ಬೇಡಿಕೆ ಇಟ್ಟಾಗ. ಜಿಲ್ಲಾಧಿಕಾರಿಗಳು, ನಗರದಲ್ಲಿ ವಿಶಾಲ ಜಾಗ ಇಲ್ಲದ ಕಾರಣ, ಸರ್ಕ್ಯೂಟ್ ಹೌಸ್ ಬಳಿ ಒಂದು ಎಕರೆ ಜಾಗ ಕೊಡುವುದಾಗಿ ಭರವಸೆ ನೀಡಿದಾಗ ಮುಖಂಡರು ಹರ್ಷ ವ್ಯಕ್ತಪಡಿಸಿದರು.
ಭಾನುವಳ್ಳಿಯಲ್ಲಿ ಪುತ್ಥಳಿ, ಮಹಾದ್ವಾರ ತೆರವುಗೊಳಿಸಿದ ಬಗ್ಗೆ ಸ್ಪಷ್ಟನೆ ನೀಡಲು ಒತ್ತಾಯಿಸಿದಾಗ, ಈ ವಿಷಯದಲ್ಲಿ ಕಾನೂನು ಪಾಲನೆ ಮಾಡಲಾಗಿದೆ ಎಂದು ಉತ್ತರಿಸಿದರು.
ಎಲ್ಲ ಇಲಾಖೆಗಳಿಂದ 15 ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಮಂಜೂರು ಮಾಡಲಾಗಿದೆ. ಪ್ರತಿ ಗ್ರಾಮದಲ್ಲೂ ಸ್ಮಶಾನದ ಅಭಿವೃದ್ಧಿಗೆ ಲ್ಯಾಂಡ್ ಬೀಟ್ ಮಾಡಲಾಗುತ್ತದೆೆ ಎಂದರು.
ಜಗಳೂರು ತಾಲ್ಲೂಕಿನ ಕೆಚ್ಚೇನ ಹಳ್ಳಿ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆ ಆಚರಣೆ ಇದೆ ಎಂದು ಹೇಳಿದಾಗ, ಉಪ- ವಿಭಾಗಾ ಧಿಕಾರಿ ಹಾಗೂ ಪೊಲೀಸ್ ಉಪಾಧೀ ಕ್ಷಕರು ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಜಿ.ಪಂ ಸಿಇಒ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ ನಿವೇಶನ, ಕುಡಿಯುವ ನೀರಿನ ಪೂರೈಕೆ ಬಗ್ಗೆ ತುರ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಾತ್ರೆ ವೇಳೆ ಅಲೆಮಾರಿಗಳ ಅಂಗಡಿಗೆ ಅನುಮತಿ ನೀಡಲು ಪೊಲೀಸ್ ಸಿಬ್ಬಂದಿ ಹಣ ಕೇಳುತ್ತಾರೆ ಎಂದಾಗ ಇಂತಹ ಪ್ರಕರಣಗಳ ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಹೆಚ್ಚುವರಿ ರಕ್ಷಣಾಧಿಕಾರಿ ವಿಜ ಯಕುಮಾರ್ ಎಂ. ಸಂತೋಷ್ ಹೇಳಿದರು.
ಬಗರ್ ಹುಕ್ಕುಂ ಜಮೀನು ಮಂಜೂರಾತಿ, ಇ-ಸ್ವತ್ತು, ರಸ್ತೆ ಒತ್ತುವರಿ, ಸಿಜಿ ಆಸ್ಪತ್ರೆಯಲ್ಲಿ ನೇರಪಾವತಿ ಮೂಲಕ ಸಿಬ್ಬಂದಿ ನೇಮಕ ಸೇರಿದಂತೆ ಕುಂದುಕೊರತೆ ಬಗ್ಗೆ ಪ್ರಸ್ತಾಪಿಸಿದರು.
ಸಿಪಿಓ ಮಲ್ಲಾನಾಯ್ಕ್, ದಾವಣಗೆರೆ ಉಪವಿಭಾಗಾಧಿಕಾರಿ ದುರ್ಗಶ್ರೀ, ಪಾಲಿಕೆ ಆಯುಕ್ತೆ ರೇಣುಕಾ ಮತ್ತು ಇತರರು ಉಪಸ್ಥಿತರಿದ್ದರು.