ಸರ್ಕಾರಿ ಶಾಲೆಗಳ ದುಸ್ಥಿತಿ: ಹೈಕೋರ್ಟ್ ಕಟು ಟೀಕೆ; ತಜ್ಞರ ಸಮಿತಿ ರಚನೆಗೆ ಎಐಡಿಎಸ್ಒ ಆಗ್ರಹ

 ದಾವಣಗೆರೆ, ಅ.12-   ಸರ್ಕಾರಿ ಶಾಲೆಗಳ ದುಸ್ಥಿತಿ ಕುರಿತಂತೆ  ಹೈಕೋರ್ಟ್ ಎತ್ತಿರುವ ಪ್ರಶ್ನೆ ಗಳು ಹಾಗೂ ವ್ಯಕ್ತಪಡಿಸಿರುವ ಕಳಕಳಿ ಒಂದು ನೆಲೆ ಕಾಣಬೇಕಾದರೆ ಈ ಕೂಡಲೇ ಪ್ರಸಕ್ತ ರಾಜ್ಯ ಸರ್ಕಾರ ತಜ್ಞರ ಸಮಿತಿಯನ್ನು ರೂಪಿಸಿ ಸರ್ಕಾರಿ ಶಾಲೆಗಳು ಹಾಗೂ ಒಟ್ಟಾರೆ ಸಾರ್ವ ಜನಿಕ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಲು ತುರ್ತು ಕ್ರಮ ಕೈಗೊಳ್ಳಬೇಕು  ಎಂದು ಎಐಡಿಎಸ್ಒ   ರಾಜ್ಯ ಕಾರ್ಯ ದರ್ಶಿ ಅಜಯ್ ಕಾಮತ್ ಆಗ್ರಹಿಸಿದ್ದಾರೆ. 

ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳ ಕುರಿತು ರಾಜ್ಯ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿ ಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ವಿಚಾರಣೆ ನಡೆಸುವ ಸಂದರ್ಭದಲ್ಲಿ ಕಳೆದ ಹತ್ತು ವರ್ಷಗಳಿಂದ ರಾಜ್ಯವನ್ನು ಆಳಿರುವ ಎಲ್ಲ ಸರ್ಕಾರಗಳ ಮೇಲೆ, ಸರ್ಕಾರಿ ಶಾಲೆಗಳ ಶೋಚನೀಯ ಪರಿಸ್ಥಿತಿಯ ಕುರಿತು ಗಂಭೀರ ಟೀಕೆಯನ್ನು ಮಾಡಿದೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ಕೊರತೆ, ಕುಡಿಯುವ ನೀರಿನ ಅಭಾವ, ಶಿಥಿಲಗೊಂಡಿರುವ ಕಟ್ಟಡಗಳು ಇನ್ನಿತರೆ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳ ಬದಲು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ ಎಂದು ಹೈಕೋರ್ಟ್ ತೀವ್ರವಾಗಿ ಟೀಕಿಸಿದೆ.

ಕಳೆದ ಹತ್ತು ವರ್ಷಗಳಿಂದ ಹಲವು ಬಜೆಟ್ ಮಂಡನೆಯಾದರೂ, ಹಲವು ಯೋಜನೆಗಳಿಗೆ ಹಣ ಬಿಡುಗಡೆಗೊಂಡರೂ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹದಗೆಡಿಸಿ, ಸರ್ಕಾರವೇ ಖಾಸಗಿ ಶಾಲೆಗಳ ದಾಖಲಾತಿ ಹೆಚ್ಚಿಸುತ್ತಿಲ್ಲವೇ? ಎಂದೂ ಸಹ ಘನ ನ್ಯಾಯಾಲಯ ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿದೆ. 

ಸ್ವಾತಂತ್ರ್ಯ ಹೋರಾಟಗಾರರು ಹಾಗೂ ನವೋದಯ ಚಿಂತಕರ ಕನಸಾಗಿದ್ದ ಈ ದೇಶದ ಎಲ್ಲ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸಲು ರಾಜ್ಯದ ಎಲ್ಲ ಜನ ಒಂದಾಗಬೇಕೆಂದು  ಎಐಡಿಎಸ್ಒ ರಾಜ್ಯ ಸಮಿತಿ ಮನವಿ ಮಾಡಿರುವುದಾಗಿ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ತಿಳಿಸಿದ್ದಾರೆ. 

error: Content is protected !!