ಹರಪನಹಳ್ಳಿ : ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್
ಹರಪನಹಳ್ಳಿ, ಮೇ 24- ಕೊರೊನಾದಿಂದ ಸಂಕಷ್ಟಕ್ಕೀಡಾದ ತಾಂಡಾ ಜನರಿಗೆ ಉದ್ಯೋಗ ಒದಗಿಸಲು ತಾಂಡಾ ಅಭಿವೃದ್ಧಿ ನಿಗಮದಿಂದ ಪೈಲೆಟ್ ಪ್ರೋಗ್ರಾಂ ಹಾಕಿಕೊಳ್ಳಲಾಗಿದೆ ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಹಾವಳಿಯಿಂದ ಲಾಕ್ಡೌನ್ ಆಗಿ ಹೆಚ್ಚು ಸಂಕಷ್ಟಕ್ಕೀಡಾದವರು ತಾಂಡಾ ಜನರು. ಪ್ರಧಾನ ಮಂತ್ರಿ ಹಾಗೂ ಮುಖ್ಯ ಮಂತ್ರಿಯವರು ರೂಪಿಸಿರುವ ಕೊರೊನಾ ಸಂಬಂಧಿತ ಯೋಜನೆ ಗಳಲ್ಲಿ ತಾಂಡಾದ ಜನರನ್ನು ತೊಡಗಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ತಕ್ಷಣದಲ್ಲಿ ಹಣ ಸಿಗುವ ಕೆಲಸ ಎಂದರೆ ನರೇಗ ಯೋಜನೆ. ಆದ್ದರಿಂದ ಪ್ರತಿ ತಾಂಡಾದಲ್ಲಿ ಸರಾಸರಿ 100 ಜನರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಪೈಲೆಟ್ ಪ್ರೋಗ್ರಾಂ ರೂಪಿಸಿ ಈಗಾಗಲೇ ಅದಕ್ಕಾಗಿ ಒಬ್ಬ ನೋಡಲ್ ಅಧಿಕಾರಿಯನ್ನೂ ಸಹ ನೇಮಕ ಮಾಡಲಾಗಿದೆ.
ಈ ಮೂಲಕ 10 ಸಾವಿರ ಕೋಟಿ ರೂ. ನರೇಗ ದಡಿ ಕಾರ್ಮಿಕರ ಕೈಗೆ ತಲುಪುತ್ತದೆ ಹಾಗೂ ಅಷ್ಟೇ ಮೊತ್ತದ ಅಸೆಟ್ ಸಹ ಆಗುತ್ತದೆ ಎಂದ ಅವರು, ಪ್ರತಿ ತಾಂಡಾಗಳಿಂದ 4 ಕಾರ್ಮಿಕ ಬಂಧುಗಳನ್ನು ಗುರುತಿಸಿ ತಾಂಡಾ ಅಭಿವೃದ್ಧಿ ನಿಗಮದಿಂದ ಲಾಕ್ಡೌನ್ ಮುಗಿದ ನಂತರ ತರಬೇತಿ ನೀಡಲಾಗುತ್ತದೆ ಎಂದರು.
15 ಜಿಲ್ಲೆಗಳಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಪೈಲೆಟ್ ಪ್ರೋಗ್ರಾಂ ರೂಪಿಸಲಾಗುವುದು. ನಿಗಮದಿಂದ ತಾಂಡಾದ ರೈತರು ಬೆಳೆದ ಎಲ್ಲಾ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಪ್ರಯತ್ನಿಸಲಾಗುವುದು.ಸೂರಗೊಂಡನಕೊಪ್ಪ, ಬೀದರ್ ಜಿಲ್ಲೆಯ ಲಾಲ್ ಧರೆ, ಕೊಪ್ಪಳ ಜಿಲ್ಲೆಯ ಬಹದ್ದೂರು ಬಂಡೆಗಳಲ್ಲಿ ನಿಗಮದಿಂದ ಜವಳಿ ಪಾರ್ಕ್ಗಳನ್ನು ಸಹ ನಿರ್ಮಾಣ ಮಾಡಲಾಗುವುದು ಎಂದರು.
ವಲಸೆ ಕಾರ್ಮಿಕರಲ್ಲಿ ಅತಿ ಹೆಚ್ಚು ಕಾರ್ಮಿಕರೆಂದರೆ ಲಂಬಾಣಿ ಸಮುದಾಯದವರು ಎಂದ ಅವರು, ಅಂದಾಜು 5 ಲಕ್ಷ ಜನ ಲಂಬಾಣಿ ಜನರು ಹೊರ ರಾಜ್ಯಗಳಿಗೆ ಹೋಗಿದ್ದರು. ಲಾಕ್ ಡೌನ್ ಆದ ನಂತರ ಈಗಾಗಲೇ ಶೇ. 80 ರಷ್ಟು ಜನರು ವಾಪಸ್ ರಾಜ್ಯಕ್ಕೆ ಮರಳಿದ್ದಾರೆ, ಉಳಿದವ ರನ್ನು ರಾಜ್ಯಕ್ಕೆ ಕರೆತಂದು ಕ್ವಾರಂಟೈನ್ನಲ್ಲಿ ಇರಿ ಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.
ಸೇವಾ ಸಿಂಧುನಲ್ಲಿ ಇಲ್ಲಿಗೆ ಬರಲು ಅರ್ಜಿ ಹಾಕಿಸುವುದು ಸೇರಿದಂತೆ ಹೊರ ರಾಜ್ಯದಿಂದ ಬರುವ ಎಲ್ಲಾ ತಾಂಡಾಗಳ ಜನರನ್ನು ಸಂಪರ್ಕಿಸಲಾಗಿದೆ. ಅವರ ಸಂಕಷ್ಟಗಳಿಗೆ ನಿಗಮ ಸ್ಪಂದಿಸಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಂ.ಪಿ.ನಾಯ್ಕ, ರಾಘವೇಂದ್ರಶೆಟ್ಟಿ, ತಾ.ಪಂ ಉಪಾಧ್ಯಕ್ಷ ಮಂಜಾನಾಯ್ಕ, ಎಂ.ಸಂತೋಷ್, ಯು.ಪಿ.ನಾಗರಾಜ್, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಉಪಸ್ಥಿತರಿದ್ದರು.