ಮಾರಕವಾಗಿರುವ ಕೊರೊನಾ ರೋಗದಿಂದ ಮುಕ್ತಿ ದೊರೆಯಲಿ

ಬಿಷಪ್ ಫ್ರಾನ್ಸಿಸ್ ಸೆರಾವೊ

ಹರಿಹರ, ಸೆ. 8 – ಇಡೀ ವಿಶ್ವಕ್ಕೆ ಮಾರಕ ರೋಗ ಕೊರೊನಾದಿಂದ ನಮ್ಮೆಲ್ಲರ ಜೀವನ ಕಂಗೆಟ್ಟಿದೆ. ಇದರಿಂದ ಮುಕ್ತಿ ದೊರೆಯಲಿ ಎಂದು ಹರಿಹರ ಆರೋಗ್ಯ ಮಾತೆಯಲ್ಲಿ ಪ್ರಾರ್ಥಿಸುವುದಾಗಿ  ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೊ  ಆಶಿಸಿದ್ದಾರೆ. 

ಇಂದು ನಡೆದ ಹರಿಹರ ಆರೋಗ್ಯಮಾತೆ ಬಸಿಲಿಕಾದ ಮಹೋತ್ಸವ ನಿಮ್ಮಿತ್ತ ಹಮ್ಮಿಕೊಂಡಿದ್ದ ಪೂಜಾವಿಧಿಯನ್ನು ಅರ್ಪಿಸಿ ಭಕ್ತ ಜನರಿಗೆ ಆಶೀರ್ವಾದ ನೀಡಿ ಮಾತನಾಡಿದರು.

ಪ್ರತಿ ವರ್ಷ ಹರಿಹರ ಮಾತೆಯ ವಾರ್ಷಿಕ ಮಹೋತ್ಸವನ್ನು ಅದ್ಧೂರಿಯಿಂದ ಸಾವಿರಾರು ಭಕ್ತಾದಿಗಳ ಸಮೂಹದೊಂದಿಗೆ ಆಚರಿಸುತ್ತಿದ್ದೆವು. ಆದರೆ, ಈ ಬಾರಿ ಕೊರೊನಾ ಮಾರಕ ಕಾಯಿಲೆಯ ಕಾರಣಕ್ಕಾಗಿ ಅತ್ಯಂತ ಸರಳವಾಗಿ ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸುತ್ತಾ ಕೇವಲ ಪೂಜಾ ವಿಧಿಗಳಿಗೆ ಸೀಮಿತವಾದ ಭಕ್ತಿ ಕಾರ್ಯಗಳನ್ನು ಮಾತ್ರ ಹಮ್ಮಿಕೊಂಡಿದ್ದೇವೆ. ಇಡೀ ವಿಶ್ವಕ್ಕೆ ಮಾರಕವಾಗಿರುವ ಈ ಕೊರೊನಾ ಕಾಯಿಲೆ ನಿರ್ಮೂಲನೆಯಾಗಲಿ. ವಿಶ್ವದ ಎಲ್ಲಾ ಜನರ ಜೀವನ ಹಸನಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನುಡಿದರು.

ಈ ಸಂದರ್ಭದಲ್ಲಿ ಹರಿಹರ ಮಾತೆ ಬಸಿಲಿಕದ ಮುಖ್ಯ ಗುರುಗಳಾದ ಫಾದರ್ ಡಾ. ಅಂತೋಣಿ ಪೀಟರ್ ಮಾತನಾಡಿ, ಕೊರೊನಾ ಕಾಯಿಲೆ ಅನೇಕ ಜನರ ಜೀವ, ಜೀವನವನ್ನು ಕಿತ್ತು ಕೊಂಡಿದೆ. ಇದರಿಂದ ಮುಕ್ತಿ ಪಡೆಯಲು ನಾವು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ ಎಂದು ಕರೆ ನೀಡಿದರು.

ಮೇರಿ ಮಾತೆಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಿ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿದ್ದು ಸಾರ್ವಜನಿಕರ ಆಕರ್ಷಣೆಯಾಗಿತ್ತು.

error: Content is protected !!