ದೇವಸ್ಥಾನ ನಿರ್ಮಿಸಿದರೆ ಸಾಲದು, ಸ್ವಚ್ಛತೆ ಕಾಪಾಡಿ

ಮಲೇಬೆನ್ನೂರು ಕಳಸಾರೋಹಣ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣಾನಂದ ತೀರ್ಥ ಸ್ವಾಮೀಜಿ

ಮಲೇಬೆನ್ನೂರು, ನ.12- ವಿಘ್ನ ನಿವಾರಕ ವಿನಾಯಕನಿಗೆ ಮೊದಲ ಪೂಜೆ ಮಾಡುವ ಪರಿಪಾಠ ಹಿಂದಿನಿಂದಲೂ ಬಂದಿದ್ದು, ಒತ್ತಡದ ಬದುಕಿನ ಕಲಿಯುಗದಲ್ಲಿ ಮೋಕ್ಷ ಪಡೆಯಲು ದೇವರ ಮೊರೆ ಹೋಗಿ, ಭಕ್ತಿಮಾರ್ಗ ಅನುಸರಿಸಿ ಎಂದು ತೀರ್ಥಹಳ್ಳಿ ತಾಲ್ಲೂಕು ಮುಳುಬಾಗಿಲು ದ್ವಾರಕ ಸಂಸ್ಥಾನದ ಶ್ರೀ ಕೃಷ್ಣಾನಂದ ತೀರ್ಥ ಸ್ವಾಮೀಜಿ ಹೇಳಿದರು.

ಪಟ್ಟಣದ ಇಂದಿರಾ ನಗರದ 6ನೇ ವಾರ್ಡ್‌ನಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣವನ್ನು ಇಂದು ನೆರವೇರಿಸಿದ ನಂತರ ನಡೆದ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ದೇವಾಲಯದ ಕೀರ್ತಿ ಹೆಚ್ಚಿಸುವಲ್ಲಿ ಮೂಲ ವಿಗ್ರಹದ ಪೂಜೆ, ಗೋಪುರದ ಕಳಸ, ಗಂಟೆ, ಮಂಗಳವಾದ್ಯ, ವೇದಘೋಷ ಪ್ರಮುಖ ಪಾತ್ರ ವಹಿಸುತ್ತವೆ. ದೇವಸ್ಥಾನಗಳನ್ನು ನಿರ್ಮಿಸಿ ದರೆ ಸಾಲದು, ಅಲ್ಲಿ ಸ್ವಚ್ಛತೆ ಕಾಪಾಡಿ, ಜನರಲ್ಲಿ ಭಕ್ತಿಭಾವ ಬರುವಂತೆ ಸುಂದರ ವಾತಾವರಣ ಸೃಷ್ಟಿ ಮಾಡಬೇಕೆಂದು ಸ್ವಾಮೀಜಿ ಹೇಳಿದರು.

ಕಳಸಾರೋಹಣದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ, ಹೋಮಗಳು ಹಂಚಿನ ಮನೆ ಸುರೇಶ್ ಶಾಸ್ತ್ರಿ, ಗುರುಪ್ರಸಾದ್ ಜೋಯಿಸ್‌ ಅವರ ನೇತೃತ್ವದಲ್ಲಿ ನಡೆದವು. ಈ ವೇಳೆ ಸಾಮೂಹಿಕ ವಿವಾಹದಲ್ಲಿ 2 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಜಿ.ಪಂ. ಮಾಜಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ, ಪುರಸಭೆ ಮಾಜಿ ಉಪಾಧ್ಯಕ್ಷ ಬಿ.ಎಂ. ಚನ್ನೇಶ್ ಸ್ವಾಮಿ, ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಹಿರಿಯ ರಾದ ನಿಟ್ಟೂರಿನ ಸಂಜೀವಮೂರ್ತಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಭೋವಿಕುಮಾರ್, ದೇವಸ್ಥಾನ ಸಮಿತಿಯ ಕೆ.ಜಿ. ರಂಗನಾಥ್, ಹಲುವಾಗಲು ಚಂದ್ರಪ್ಪ, ಕೆ.ಆರ್. ಜಯ್ಯಣ್ಣ, ಕೂಲಂಬಿ ಬಸವ ರಾಜಪ್ಪ, ವೈ.ಜಿ. ಶಿವಕುಮಾರ್, ಕೆ.ಜಿ. ಲೋಕೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪಟ್ಟಣದ ಕಾಲಭೈರೇಶ್ವರ ದೇವಸ್ಥಾನದ ಗೋಪುರಕ್ಕೆ ಇದೇ ದಿನ ಶ್ರೀ ಕೃಷ್ಣಾನಂದ ತೀರ್ಥ ಸ್ವಾಮೀಜಿ ಅವರು ಕಳಸಾರೋಹಣ ನೆರವೇರಿಸಿದರು. ಪೇಟೆ ಬೀದಿಯ ಶಂಕರಮಠಕ್ಕೆ ಶ್ರೀಗಳು ಭೇಟಿ ನೀಡಿ, ಭಕ್ತರಿಗೆ ದರ್ಶನಾಶೀರ್ವಾದ ನೀಡಿದರು. 

error: Content is protected !!