ಹರಪನಹಳ್ಳಿ, ನ.9- ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಹೊಂಚು ಹಾಕಿದ್ದ ನಾಲ್ವರು ದರೋಡೆಕೋರರನ್ನು ತಾಲ್ಲೂಕಿನ ಅಲಗಿಲವಾಡ ಕ್ರಾಸ್ ಬಳಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ತನಿಖೆ ಕೈಗೊಂಡ ನಂತರ ಅವರಿಂದ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಇಂದ್ರ ಮೋಡಿಕಾರ ಅಲಿಯಾಸ್ ದುರುಗಪ್ಪ, ಚನ್ನದಾಸರ ಭೀಮ ಅಲಿಯಾಸ್ ಭೀಮೇಶ, ಚಂದ್ರಪ್ಪ ಅಲಿಯಾಸ್ ಕುಲ್ಡ ಹಾಗೂ ರಮೇಶ ಬಂಧಿತ ದರೋಡೆ ಕೋರರು. ಎಲ್ಲಾ ಆರೋಪಿತರು ಹಗರಿ ಬೊಮ್ಮನಹಳ್ಳಿ ಪಟ್ಟಣದ ಕುರದಗಡ್ಡಿ ಯವರು. ಇವರ ಜೊತೆಗೆ ಸಂಶಯಾಸ್ಪದ ವ್ಯಕ್ತಿ ಮೋರಿಗೇರಿ ಮೋಡಿಕಾರ ನಾಗರಾಜ ಸೇರಿದಂತೆ, ಒಟ್ಟು 5 ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿ, ಪುನಃ ವಿಚಾರಣೆಗೆ ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.
ಇದೇ ತಂಡ ಈ ಹಿಂದೆ ಹರಪನಹಳ್ಳಿ ಪಟ್ಟಣದ ಹೊಸ ಕೆಎಚ್ಬಿ ಕಾಲೋನಿಯಲ್ಲಿ, ಪಾರ್ಕ್ ಬಳಿ ಮತ್ತು ಕೂಲಹಳ್ಳಿ ಗ್ರಾಮದಲ್ಲಿ ಮನೆ ಕಳ್ಳತನ, ಹರಪನಹಳ್ಳಿ ಪಟ್ಟಣದ ಕಾಳಿಕಾ ದೇವಸ್ಥಾನದ ಹುಂಡಿ, ಕೂಡ್ಲಿಗಿ ತಾಲ್ಲೂಕು ಹೊಸಕೆರೆ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಹುಂಡಿ, ಗುಂಡಗತ್ತಿ ಮತ್ತು ಇಟ್ಟಿಗಿ ಗ್ರಾಮದ ವೈನ್ಶಾಪ್ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ. ಇವರ ವಿರುದ್ಧ ಹರಪನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಾಲ್ಕು ದೂರುಗಳು, ಹಲುವಾಗಲು ಠಾಣೆಯಲ್ಲಿ, ಹಡಗಲಿ ತಾಲ್ಲೂಕಿನ ಇಟಗಿ ಠಾಣೆಯಲ್ಲಿ ಹಾಗೂ ಕೂಡ್ಲಿಗಿ ಠಾಣೆಯಲ್ಲಿ ದೂರುಗಳು ದಾಖಲಾಗಿವೆ.
ಪೊಲೀಸರು ಸಮಗ್ರ ವಿಚಾರಣೆ ಕೈಗೊಂಡಾಗ 145 ಗ್ರಾಂ ಬಂಗಾರದ ಆಭರಣಗಳು, 1 ಕಿಲೋ 500 ಗ್ರಾಂ ಬೆಳ್ಳಿ ಆಭರಣಗಳು, 76 ಸಾವಿರ ನಗದು, ಕಳ್ಳತನ ಮಾಡಿದ 4 ಮೋಟಾರ್ ಸೈಕಲ್ಗಳು ಸೇರಿದಂತೆ ಒಟ್ಟು 10,50,000 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣವನ್ನು ಡಿವೈಎಸ್ಪಿ ಹಾಲಮೂರ್ತಿರಾವ್ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ವೃತ್ತ ನಿರೀಕ್ಷಕ ನಾಗರಾಜ ಎಂ. ಕಮ್ಮಾರ, ಹರಪನಹಳ್ಳಿ ಪಿಎಸ್ಐ ಸಿ. ಪ್ರಕಾಶ್, ಹಲುವಾಗಲು ಪಿಎಸ್ಐ ಪ್ರಶಾಂತ್ ಹಾಗು ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿದ್ದಾರೆ. ವಿಜಯನಗರ ಜಿಲ್ಲಾ ಎಸ್ಪಿ ಡಾ. ಕೆ. ಅರುಣ್ ಪೊಲೀಸರ ಕಾರ್ಯವನ್ನು ಶ್ಲ್ಯಾಘಿಸಿದ್ದಾರೆ.