ಜಗಳೂರು : ಮಾಸ್ಕ್ ಇಲ್ಲದವರಿಗೆ ದಂಡ

ಜಗಳೂರು, ಏ.20- ಪಟ್ಟಣದಲ್ಲಿ ಇಂದು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರಿಗೆ ಮತ್ತು ಮಾಸ್ಕ್ ಇಲ್ಲದೆ ರಸ್ತೆಗಿಳಿದವರಿಗೆ ಪೊಲೀಸರು ದಂಡ ವಿಧಿಸಿ ಜಾಗೃತಿ ಮೂಡಿಸಿದರು.

ಪಟ್ಟಣದಲ್ಲಿ ದಿನದಿಂದ  ದಿನಕ್ಕೆ ಜನದಟ್ಟಣೆ ಮತ್ತು ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನ ಸವಾರರು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಸಂಚಾರಿ ನಿಯಮ ಉಲ್ಲಂಘಿಸುತ್ತಿದರು.  ಆರಕ್ಷಕ ವೃತ್ತ ನಿರೀಕ್ಷಕ ಮಂಜುನಾಥ್ ಪಂಡಿತ್ ಮತ್ತು ಆರಕ್ಷಕ ಉಪ ನಿರೀಕ್ಷಕ ಸಂತೋಷ್ ಬಾಗೋಜಿ ಮತ್ತು ಪೊಲೀಸ್ ಸಿಬ್ಬಂದಿಗಳು ಇಂದು ಜಗಳೂರು ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ಮೂರು ದಿನ ಎಡಭಾಗ ಮತ್ತು ಮೂರು ದಿನ ಬಲಭಾಗಕ್ಕೆ ನಿಲ್ಲಿಸುವಂತೆ ವಾಹನ ಸವಾರರಿಗೆ  ಕಾರ್ಯಾಚರಣೆ ಮೂಲಕ ಜಾಗೃತಿ ಮೂಡಿಸಿದರು.

ಇಂದು ಬೆಳಿಗ್ಗೆಯಿಂದ ಪಟ್ಟಣದ ಮಹಾತ್ಮ ಗಾಂಧಿ ವೃತ್ತದ ಬಳಿ ಪೊಲೀಸ್ ಇಲಾಖೆ ವತಿಯಿಂದ ಮಾಸ್ಕ್ ಇಲ್ಲದೆ ದ್ವಿಚಕ್ರ ವಾಹನ ಓಡಿಸುವವರಿಗೆ, ಅನಾವಶ್ಯಕವಾಗಿ ಪಟ್ಟಣದ ತುಂಬಾ ಓಡಾಡುವ ಸಾರ್ವಜನಿಕರಿಗೆ 100 ರೂಪಾಯಿ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಲಾಯಿತು.  ಪಟ್ಟಣದ ಮರೇನಹಳ್ಳಿ ರಸ್ತೆ ಮತ್ತು ಎನ್‌ಎಂಸಿ ಹೋಟೆಲ್ ಮುಂಭಾಗ, ಡಿಸಿಸಿ ಬ್ಯಾಂಕ್, ನಂದಿನಿ ಹೋಟೆಲ್, ಎಸ್‌ಬಿಎಂ ಬ್ಯಾಂಕ್ ಮುಂಭಾಗ ಸೇರಿದಂತೆ ಪಟ್ಟಣದ ವಿವಿಧ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಬಿಟ್ಟು ವಾಹನ ಸವಾರರು ಜನಸಾಮಾನ್ಯರಿಗೆ ಕಿರಿಕಿರಿ ಮಾಡುತ್ತಿದ್ದರು .

ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ವಾಹನ ಅಪಘಾತಗಳು ಆಗುತ್ತಿದ್ದವು. ಒಂದು ಕಡೆಯಿಂದ ಮತ್ತೊಂದು ಕಡೆ  ಪಾದಚಾರಿಗಳು ತಮ್ಮ ಜೀವವನ್ನು  ಕೈಯಲ್ಲಿಟ್ಟುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇತ್ತು. ಇದನ್ನು ಮನಗಂಡ ಪೊಲೀಸ್ ಇಲಾಖೆ ಈಗ ರಸ್ತೆಯ ಎರಡೂ ಬದಿಯ ಇಕ್ಕೆಲಗಳಲ್ಲಿ ತಮ್ಮ ವಾಹನವನ್ನು ನಿಲ್ಲಿಸುವ ಮಾಲೀಕರಿಗೆ ಐದು ನೂರು ರೂಪಾಯಿ ದಂಡ ಹಾಕುವ ಮೂಲಕ ಸಂಚಾರಿ ನಿಯಮಗಳನ್ನು ಉಲ್ಲಂಘಿಸದಂತೆ ಸವಾರರಿಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಬಸವರಾಜ್, ಟ್ರಾಫಿಕ್ ಪೊಲೀಸ್ ರಮೇಶ್, ಕುಮಾರಸ್ವಾಮಿ ಇನ್ನಿತರರು ಭಾಗವಹಿಸಿದ್ದರು.

error: Content is protected !!