ಮಲೇಬೆನ್ನೂರಿನಲ್ಲಿ ಸಖಿ ಮತಗಟ್ಟೆ ಸ್ಥಾಪನೆ

ಮಲೇಬೆನ್ನೂರಿನಲ್ಲಿ ಸಖಿ ಮತಗಟ್ಟೆ ಸ್ಥಾಪನೆ

ಮತಗಟ್ಟೆಗಳಲ್ಲಿ ಮತದಾರರಿಗೆ ಅಗತ್ಯ ಸೌಲಭ್ಯ : ಎ.ಸುರೇಶ್

ಮಲೇಬೆನ್ನೂರು, ಮೇ 6- ರಾಜ್ಯ ದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ ನಾಳೆ ದಿನಾಂಕ 7 ರಂದು ಜರುಗಲಿದ್ದು, ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮತದಾನಕ್ಕೆ ಮತಗಟ್ಟೆಗಳು ಸಕಲ ರೀತಿಯಲ್ಲೂ ಸಜ್ಜಾಗಿ ಮತದಾರರನ್ನು ಸ್ವಾಗತಿಸುತ್ತಿವೆ.

ಮಲೇಬೆನ್ನೂರು ಪುರಸಭೆ ವ್ಯಾಪ್ತಿಯಲ್ಲಿ 21 ಮತಗಟ್ಟೆಗಳಿದ್ದು, ಈ ಪೈಕಿ ಜಿಬಿಎಂಎಸ್ ಶಾಲೆಯಲ್ಲಿರುವ ಮತಗಟ್ಟೆಯನ್ನು ಈ ಬಾರಿ ಸಖಿ ಮತಗಟ್ಟೆಯನ್ನಾಗಿ ಮಾಡಲಾಗಿದೆ.

ಮಹಿಳೆಯರಲ್ಲಿ ಮತದಾನದ ಜಾಗೃತಿ ಮತ್ತು ಮಹಿಳಾ ಮತದಾನ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಲ್ಲಿ ಈ ಸಖಿ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಪಿಂಕ್ ಬಣ್ಣದಿಂದ ಕೂಡಿರುವ ಈ ಮತಗಟ್ಟೆಯನ್ನು ನವ ವಧುವಿನಂತೆ ಸಿಂಗಾರ ಮಾಡಲಾಗಿದೆ.

ಈ ಮತಗಟ್ಟೆಯಲ್ಲಿ 580 ಮಹಿಳಾ ಮತದಾರರು ಮತ್ತು 520 ಪುರುಷ ಮತದಾರರಿದ್ದಾರೆ. ಅಲ್ಲದೇ, ಈ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಚುನಾವಣಾ ಸಿಬ್ಬಂದಿಗಳೂ ಕೂಡಾ ಮಹಿಳೆಯರೇ ಆಗಿರುತ್ತಾರೆ.

ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಪಟ್ಟಣದ 12 ಮತಗಟ್ಟೆಗಳ ಆವರಣದಲ್ಲಿ ಮತದಾರರ ಅನುಕೂಲಕ್ಕಾಗಿ ಶಾಮಿಯಾನ ಹಾಕಿಸಲಾಗಿದ್ದು, ಎಲ್ಲಾ ಮತಗಟ್ಟೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿಶೇಷ ಚೇತನರಿಗೆ ಗಾಲಿ ಕುರ್ಚಿ ಸೌಲಭ್ಯವನ್ನೂ ಕಲ್ಪಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ಅವರು ಪತ್ರಕರ್ತರಿಗೆ ತಿಳಿಸಿದರು.

ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಊಟ, ಉಪಹಾರ, ಟೀ ವ್ಯವಸ್ಥೆಯನ್ನು ಮೆನು ಪ್ರಕಾರ ಮಾಡಲಾಗುವು ದೆಂದರು. ಮಲೇಬೆನ್ನೂರು ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 18,669 ಮತದಾರರಿದ್ದಾರೆ.

ಕುಂಬಳೂರಿನಲ್ಲಿ ಈ ಬಾರಿ ಸಖಿ ಮತಗಟ್ಟೆಯನ್ನು ಸಿದ್ದಪಡಿಸಿದ್ದು, ಮತದಾರ ರನ್ನು ಆಕರ್ಷಿಸುತ್ತಿದೆ. ಬಹು ತೇಕ ಎಲ್ಲಾ ಕಡೆ ಮತಗಟ್ಟೆ ಆವರಣದಲ್ಲಿ ಶಾಮಿಯಾನ ಹಾಕಿದ್ದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಭದ್ರತೆ : ಚುನಾವಣೆ ಸಂದರ್ಭದಲ್ಲಿ ಶಾಂತಿ – ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಎಲ್ಲಾ ಮತಗಟ್ಟೆಗಳಿಗೆ ಪೊಲೀಸ್ ಹಾಗೂ ಮೀಸಲು ಪಡೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಪಿಎಸ್ಐ ಪ್ರಭು ಕೆಳಗಿನಮನೆ ತಿಳಿಸಿದ್ದಾರೆ.

error: Content is protected !!