`ಪ್ರಭಾ ಪ್ರಣಾಳಿಕೆ’ ಮೂಲಕ ಜನರಿಗೆ ಕಾಂಗ್ರೆಸ್‌ ಅಭ್ಯರ್ಥಿ ಡಾ. ಪ್ರಭಾ ಪ್ರಾಮೀಸ್

`ಪ್ರಭಾ ಪ್ರಣಾಳಿಕೆ’ ಮೂಲಕ ಜನರಿಗೆ  ಕಾಂಗ್ರೆಸ್‌ ಅಭ್ಯರ್ಥಿ ಡಾ. ಪ್ರಭಾ ಪ್ರಾಮೀಸ್

ದಾವಣಗೆರೆ, ಮೇ 5- ನನ್ನ ರಾಜಕೀಯದಲ್ಲಿ `ನನ್ನ ತತ್ವ ಪ್ರಜಾಪ್ರಭುತ್ವ’ ಎಂಬ ತತ್ವವು ಜನರ ಸೇವೆ, ಸತ್ಯದ ಆಧಾರದ ಮೇಲೆ ಆಡಳಿತ ಮತ್ತು ನಾಗರಿಕರ ಕಲ್ಯಾಣಕ್ಕೆ ಆದ್ಯತೆ ನೀಡುವಂತಹ ತತ್ವಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

`ನನ್ನ ತತ್ವ ಪ್ರಜಾಪ್ರಭುತ್ವ’ದಡಿ ಪ್ರಣಾಳಿಕೆಯನ್ನು ಹೊರತಂದಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಇದರಲ್ಲಿ ತಮ್ಮ ಪರಿಚಯದೊಂದಿಗೆ ತಾವು ಮಾಡಿರುವ ಜನಸೇವೆ ಮತ್ತು ಆರೋಗ್ಯ ಸೇವೆ ಕುರಿತಂತೆ ಮಾಹಿತಿಯನ್ನು ಮತದಾರರ ಗಮನಕ್ಕೆ ತಂದಿದ್ದಾರೆ.

ಇನ್ನು ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ನೀಡಿರುವ ವೆಚ್ಚವನ್ನು ಕಾಣಿಸಿದ್ದು, ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪಂಚ ನ್ಯಾಯ- ಪಚ್ಚಿಸ್ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇನ್ನು ನಾನು ಈ ಕ್ಷೇತ್ರವನ್ನು ಪ್ರತಿನಿಧಿಸಿದರೆ ಏನೆಲ್ಲಾ ಕಾರ್ಯಕ್ರಮಗಳನ್ನು ತರುತ್ತೇನೆ ಎಂದು ಪ್ರಣಾಳಿಕೆ ಮೂಲಕ ಪ್ರಭಾ ಅವರು ದಾವಣಗೆರೆ ಜನತೆಗೆ ಪ್ರಾಮೀಸ್ ಮಾಡಿದ್ದಾರೆ. ಇದಕ್ಕೆ ತಮ್ಮ ಮಾವ ಶಾಮನೂರು ಶಿವಶಂಕರಪ್ಪ ಮತ್ತು ಪತಿ – ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಣಾಳಿಕೆಯಲ್ಲಿ ಮಹಿಳಾ ಸಬಲೀಕರಣ, ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ವಸತಿ ಕ್ಷೇತ್ರ, ಆಹಾರ ಕ್ಷೇತ್ರ, ಕಾನೂನು ಮತ್ತು ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರ, ಕ್ರೀಡಾ ಕ್ಷೇತ್ರ, ಪ್ರವಾಸೋದ್ಯಮ, ಮನರಂಜನೆ ಹಾಗೂ ಕೃಷಿ ಮತ್ತು ನೀರಾವರಿ ಸಂಶೋಧನೆ, ವಾಣಿಜ್ಯ ಮತ್ತು ಕೈಗಾರಿಕೆ ಆಧ್ಯಾತ್ಮಿಕ ಕ್ಷೇತ್ರವು ಸೇರಿದಂತೆ ಹೀಗೆ ಹತ್ತು ಹಲವು ಯೋಜನೆಗಳನ್ನು ತಿಳಿಸಿ, ಈ ಎಲ್ಲಾ ಯೋಜನೆಗಳನ್ನು 5 ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಸುವುದಾಗಿ ತಿಳಿಸಿದ್ದಾರೆ.

ಪ್ರಭಾ ಮಲ್ಲಿಕಾರ್ಜುನ್ ಅವರ ತತ್ವಶಾಸ್ತ್ರದ ನೈತಿಕ ಆಡಳಿತ, ಸಾಮಾಜಿಕ ನ್ಯಾಯ ಮತ್ತು ಅಂತರ್ಗತ ನಿರ್ಧಾರ ಗಳನ್ನು ತೆಗೆದುಕೊಳ್ಳುವ ಬಯಕೆಯಿಂದ ಪ್ರೇರೇಪಿಸಲ್ಪಟ್ಟಿದೆ. ದಾವಣಗೆರೆಯಲ್ಲಿ ಹೆಚ್ಚು ಸ್ಪಂದಿಸುವ ಮತ್ತು ಜವಾಬ್ದಾರಿಯುತ ರಾಜಕೀಯ ಪರಿಸರ ವ್ಯವಸ್ಥೆಗಾಗಿ ಈ ಮೌಲ್ಯಗಳ ಮತ್ತು ಅವರ ದೃಷ್ಟಿಗೆ ಹೊಂದಿಕೆಯಾಗುತ್ತಿದೆ ಎಂದು ಡಾ. ಪ್ರಭಾ ಅವರ ಜನ ಸಂಪರ್ಕ ಕಚೇರಿ ಪ್ರಕಟಣೆ ತಿಳಿಸಿದೆ.

ಪ್ರಚಾರದಲ್ಲೂ ಸಹ ಪ್ರತಿಯೊಂದು ಗ್ರಾಮದಲ್ಲೂ ಮಹಿಳೆಯರೊಂದಿಗೆ ಸಂವಾದ ನಡೆಸಿರುವ ಪ್ರಭಾ ಮಲ್ಲಿಕಾರ್ಜುನ್ ಅವರು, ಆರೋಗ್ಯ ರಕ್ಷಣೆ ಬಗ್ಗೆ ಮಾಹಿತಿ ನೀಡಿ ಅವರ ಕಷ್ಟಗಳನ್ನು ಆಲಿಸಿರುವುದು ಹಾಗೂ ಶೋಷಿತರು, ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಹಾಗೂ ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಮಾತುಕತೆ ನಡೆಸಿರುವುದು ಅವರ ಔದಾರ್ಯಕ್ಕೆ ಸಾಕ್ಷಿಯಾಗಿದೆ ಎಂದು ಪ್ರಕಟಣೆ ಬಣ್ಣಿಸಿದೆ.

error: Content is protected !!