ಮೇಯರ್ ಸ್ಥಾನಕ್ಕೆ ಕೆ. ಚಮನ್ಸಾಬ್, ಉಪ ಮೇಯರ್ ಸ್ಥಾನಕ್ಕೆ ಸೋಗಿ ಶಾಂತಕುಮಾರ್ ಆಯ್ಕೆ ಸಾಧ್ಯತೆ
ದಾವಣಗೆರೆ, ಸೆ.26- ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ನಾಳೆ ದಿನಾಂಕ 27ರ ಶುಕ್ರವಾರ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷವು ಅಧಿಕಾರ ಗದ್ದಿಗೆ ಉಳಿಸಿಕೊಳ್ಳುವ ವಿಶ್ವಾಸಕ್ಕೆ ಬಿಜೆಪಿ ತಣ್ಣೀರು ಎರೆಚಲು ಶತ ಪ್ರಯತ್ನ ನಡೆಸಿದೆ.
ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಈ ಚುನಾವಣೆ ನಡೆಯಲಿದೆ.
ಮೇಯರ್ ಸ್ಥಾನವು ಹಿಂದುಳಿದ ವರ್ಗ `ಅ’ ಮತ್ತು ಉಪಮೇಯರ್ ಸ್ಥಾನವು ಹಿಂದುಳಿದ ವರ್ಗ `ಬ’ ಗೆ ಮೀಸಲಿದ್ದು, ಪ್ರಸ್ತುತ ಪಾಲಿಕೆ ಆಡಳಿತ ಅವಧಿಗೆ ಉಳಿದಿರುವ ಕೇವಲ ನಾಲ್ಕು ತಿಂಗಳು, 20 ದಿನಗಳಿಗೆ ನಾಳೆ ಶುಕ್ರವಾರ ಚುನಾವಣೆ ನಿಗದಿಯಾಗಿದೆ.
ಪಾಲಿಕೆಯ 45 ಸದಸ್ಯರ ಪೈಕಿ ಓರ್ವ ಸದಸ್ಯ ಅಕಾಲಿಕ ನಿಧನ ಹೊಂದಿದ್ದಾರೆ. ಇದರಿಂದ ಸದಸ್ಯರ ಬಲ 44. ಸಂಸದರು, ಇಬ್ಬರು ಶಾಸಕರು, ಓರ್ವ ವಿಧಾನ ಪರಿಷತ್ ಸದಸ್ಯರು ಸೇರಿದಂತೆ 48 ಜನ ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ.
ಮೂರು ಬಾರಿ ಬಿಜೆಪಿ ಪಾಲಿಕೆಯ ಅಧಿಕಾರ ಹಿಡಿದಿತ್ತು. ಕಳೆದ ಬಾರಿ ಮೀಸಲಾತಿ ಪರಿಣಾಮದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು.
ತನ್ನ ಸದಸ್ಯರೊಟ್ಟಿಗೆ ಮೂವರು ಪಕ್ಷೇತರ ಅಭ್ಯರ್ಥಿಗಳು, ಬಿಜೆಪಿಯಿಂದ ಬಂದಿರುವ ನಾಲ್ಕು ಸದಸ್ಯರ ಬಲದಿಂದಾಗಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಸನ್ನದ್ಧವಾಗಿದೆ.
ಈ ಹಿನ್ನೆಲೆಯಲ್ಲಿ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ವರಿಷ್ಠರು ಮುಸ್ಲಿಂ ಸಮುದಾಯಕ್ಕೆ ಆದ್ಯತೆ ನೀಡಲು ತೀರ್ಮಾನಿಸಿದ್ದಾರೆ ಎಂದು ವಿಶ್ವಾನೀಯ ಮೂಲಗಳು ತಿಳಿಸಿವೆ. ಇದರಂತೆ ಆ ಸಮುದಾಯದ ಎ.ಬಿ. ರಹೀಂ, ಕೆ. ಚಮನ್ಸಾಬ್ ಹೆಸರುಗಳು ಮುಂಚೂಣಿಯಲ್ಲಿವೆ. ರಹೀಂ ಅವರು ಈಗಾಗಲೇ ಒಮ್ಮೆ ನಗರಸಭೆ ಅಧ್ಯಕ್ಷರಾಗಿದ್ದ ಕಾರಣ, ಚಮನ್ಸಾಬ್ ಅವರಿಗೆ ಅವಕಾಶ ನೀಡಲು ಕಾಂಗ್ರೆಸ್ ವರಿಷ್ಠರು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಉಪ ಮೇಯರ್ ಸ್ಥಾನಕ್ಕೆ ಈಚಿಗೆ ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆಯಾಗಿರುವ ಸೋಗಿ ಶಾಂತಕುಮಾರ್ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ವರಿಷ್ಠರು ತೀರ್ಮಾನಿಸಿದ್ದಾರೆಂದು ಮೂಲಗಳು `ಜನತಾವಾಣಿ’ಗೆ ವಿವರಿಸಿವೆ.