ದಾವಣಗೆರೆ, ಮೇ 27- ಕಲೆಗೆ ಕೊಡುವ ಪ್ರಾಮುಖ್ಯತೆಯಿಂದ ಪ್ರತಿಯೊಬ್ಬರ ಬದುಕಿನಲ್ಲಿ ನೆಮ್ಮದಿ, ಸಂತೋಷ ಪಡೆದುಕೊಳ್ಳಲು ಸಾಧ್ಯವಿದೆ. ಕಲೆಯಿಲ್ಲದ ಜೀವನವಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಯು.ಎಸ್. ಮಹಾಬಲೇಶ್ವರ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಎನ್ಎಸ್‌ಎಸ್ ಘಟಕ, ದಾವಣಗೆರೆ ವಿವಿ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಭಿತ್ತಿ ಚಿತ್ರ ಕಲಾ ಶಿಬಿರವನ್ನು ಕಾಲೇಜಿನ ಕಾಂಪೌಂಡ್ ಗೋಡೆಯ ಮೇಲೆ ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ `ಭಿತ್ತಿ ಚಿತ್ರ ಕಲಾ ಶಿಬಿರ’ ಆಯೋಜಿಸಿರುವುದು ಸಂತಸದ ಸಂಗತಿ.ಇಲ್ಲಿ ಮೂಡಿ ಬರುವ ಚಿತ್ತಾರಗಳು ಅರ್ಥಪೂರ್ಣವೂ, ಸಾರ್ವಜನಿಕರಿಗೆ ಆನಂದ ಉಂಟು ಮಾಡಿವೆ. ಇದೇ ರೀತಿ ಉತ್ತಮ ಸಂದೇಶವನ್ನು ನೀಡುವಂತವುಗಳಾಗಿರಲಿ. ಕಲಾ ವಿದ್ಯಾರ್ಥಿಗಳು ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ದಾವಣಗೆರೆ ವಿವಿ ಎನ್‌ಎಸ್‌ಎಸ್ ಸಂಯೋಜ ನಾಧಿಕಾರಿ ಡಾ.ಅಶೋಕ್ ಕುಮಾರ್ ವಿ. ಪಾಳೇದ ಮಾತನಾಡಿ, ಈ ಕಾರ್ಯಕ್ರಮವನ್ನು 2023-24 ನೇ ಸಾಲಿನ ಅನುದಾನದಲ್ಲಿ ಆಯೋಜಿಸಲಾಗಿದ್ದು, ದೃಶ್ಯ ಕಲಾ ಮಹಾವಿದ್ಯಾಲಯದ ಆವರಣದ ಗೋಡೆ ಅಲಂಕಾರಗೊಳ್ಳುವುದು ಹಾಗೂ ಈ ಭಾಗದಲ್ಲಿ ಓಡಾಡುವ ಸಾರ್ವಜನಿಕರ ಗಮನ ಸೆಳೆದ ಮೌಲ್ಯಯುತ ಸಂದೇಶವನ್ನು ಸಾರುವ ಉದ್ದೇಶ ಹೊಂದಲಾಗಿದೆ ಎಂದರು.
ದೃಶ್ಯಕಲಾ ಮಹಾವಿದ್ಯಾಲಯದ ಅಸ್ಮಿತೆ ಕಾಪಾಡುವುದು ಕೂಡ ಶಿಬಿರದ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.
ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ್ ಮಾತನಾಡಿ, ವಿದ್ಯಾರ್ಥಿಗಳು ಚಿತ್ರ ರಚನೆಗೆ ತೊಡಗುವ ಸಿದ್ಧತೆಯಲ್ಲಿರುವ ಸಂದರ್ಭದಲ್ಲಿ ಸ್ವಯಂಪ್ರೇರಣೆಯಿಂದ ಆಗಮಿಸಿ ಗೋಡೆಯ ಮೇಲೆ ಎನ್‌ಎಸ್‌ಎಸ್ ಅಕ್ಷರ ಮೂಡಿಸಿ, ಶುಭವಾಗಲಿ ಎಂದು ಹಾರೈಸಿ, ಹುರಿದುಂಬಿಸಿದ್ದು ವಿಶೇಷವಾಗಿತ್ತು.
ಹಿರಿಯ ಚಿತ್ರ ಕಲಾವಿದ ಎ. ಮಹಾಲಿಂಗಪ್ಪ ಮಾತನಾಡಿ, ದೃಶ್ಯಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭೆ ಕೇವಲ ಕಾಲೇಜು ಮತ್ತು ವಿವಿಗೆ ಮಾತ್ರ ಸೀಮಿತವಾಗಿರಬಾರದು. ಜಿಲ್ಲೆ ಮತ್ತು ಗ್ರಾಮೀಣ ಪ್ರದೇಶದಲ್ಲೂ ಪ್ರತಿಭೆ ಪರಿಚಯವಾಗಬೇಕು. ಈ ನಿಟ್ಟಿನಲ್ಲಿ ದಾವಣಗೆರೆ ವಿವಿ, ಮಹಾನಗರ ಪಾಲಿಕೆ ಸಂವಹನ ನಡೆಸಿ, ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕಾನೂನು ರೀತ್ಯಾ ದೃಶ್ಯ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಜಿಲ್ಲೆಯಾದ್ಯಂತ ಭಿತ್ತಿ ಚಿತ್ರ ರಚನೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದರು.
ದಾವಣಗೆರೆ ವಿವಿ ದೃಶ್ಯ ಕಲಾ ಮಹಾವಿದ್ಯಾಲದ ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಸತೀಶ್ ಕುಮಾರ್ ಪಿ. ವಲ್ಲೇಪುರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್ ನಿರೂಪಿಸಿದರು.