ಚನ್ನಗಿರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ

ಚನ್ನಗಿರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಭರವಸೆ

ಚನ್ನಗಿರಿ, ಏ.12- ಚಿತ್ರದುರ್ಗ- ಚನ್ನಗಿರಿ-ಶಿವಮೊಗ್ಗ ದ್ವಿಪಥ ಹೆದ್ದಾರಿಯನ್ನು 334 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ದಾವಣಗೆರೆ-ಚನ್ನಗಿರಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರದಿಂದ ತಾತ್ವಿಕ ಅನುಮೋ ದನೆ ಸಿಕ್ಕಿದ್ದು, ಯೋಜನಾ ವರದಿ ಸಿದ್ಧ ಪಡಿಸಲಾಗುತ್ತಿದೆ. ಚನ್ನಗಿರಿ ತಾಲ್ಲೂಕಿನಲ್ಲಿ ಸಮಗ್ರ ನೀರಾವರಿ ಯೋಜನೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ನಾನು ಕಟಿಬದ್ಧಳಾಗಿದ್ದೇನೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿಳಿಸಿದರು.

ಚನ್ನಗಿರಿ ತಾಲ್ಲೂಕಿನ 20 ಕ್ಕೂ ಹೆಚ್ಚು ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಸಂಸದ ಜಿ.ಎಂ.ಸಿದ್ದೇಶ್ವರ ಅವರು 20 ವರ್ಷಗಳಲ್ಲಿ ಚನ್ನಗಿರಿ ತಾಲ್ಲೂಕಿನ ಅಭಿವೃದ್ಧಿಗೆ ಸಾಕಷ್ಟ ಶ್ರಮಿಸಿದ್ದಾರೆ. ನಿಮ್ಮ ಸೇವೆ ಮಾಡಲು ಈ ಬಾರಿ ನನಗೆ ಅವಕಾಶ ಸಿಕ್ಕಿದೆ. ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆ ಯಶಸ್ವಿ ಅನುಷ್ಟಾನ ಹಾಗೂ ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ಅಭಿ ವೃದ್ಧಿಗೆ ನಾನು ಶ್ರಮಿಸುತ್ತೇನೆ ಎಂದರು.

ಜಿ.ಎಂ.ಸಿದ್ದೇಶ್ವರ ಅವರು ಜಿಲ್ಲೆಯ 2ನೇ ಆದರ್ಶ ಗ್ರಾಮವಾಗಿ ಚನ್ನಗಿರಿ ತಾಲ್ಲೂಕಿನ ಮಲ್ಲಾಪುರ ಗ್ರಾಮ ಆಯ್ಕೆ ಮಾಡಿಕೊಂಡು ಸುಮಾರು 2.11 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಗಳನ್ನು ಮಾಡಿಸಿದ್ದಾರೆ. 1.50 ಕೋಟೆ ವೆಚ್ಚದಲ್ಲಿ ರೈತರಿಗೆ ಅನುಕೂಲವಾಗುವಂತೆ ಟ್ರಾನ್ಸ್‌ಫಾರ್ಮರ್‌ಗಳನ್ನು ಹಾಕಿಸಿ ವಿದ್ಯುತ್ ಸಂಪರ್ಕ ಕೊಡಿಸಿದ್ದಾರೆ. 

ಸಂತೆಬೆನ್ನೂರಿನಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣಕ್ಕೆ 2.35 ಕೋಟಿ ಅನುದಾನ, ದೇವರಹಳ್ಳಿ ಯಲ್ಲಿ 9.50 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್, ಚನ್ನಗಿರಿ ಪಟ್ಟಣದಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ 4.12 ಕೋಟಿ, 15ನೇ ಹಣಕಾಸು ಯೋಜನೆಯಲ್ಲಿ ಪುರಸಭೆಗೆ 93 ಲಕ್ಷ ರೂಪಾಯಿ ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ದೇಶ ಸರ್ವಾಂಗೀಣ ಅಭಿವೃದ್ಧಿ ಆಗಿದೆ. ದೇಶದ ರಕ್ಷಣೆ, ಸನಾತನ ಧರ್ಮದ ಉಳಿವು, ಏಳ್ಗೆಗಾಗಿ ಮೋದಿ ಜೀ ಅವರು ಅಹೋರಾತ್ರಿ ಶ್ರಮಿಸುತ್ತಿದ್ದಾರೆ. ಅಂತಹ ಧೀಮಂತ ನಾಯಕ ನಮಗೆ-ನಿಮಗೆ ಸಿಕ್ಕಿರುವುದು ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ. ಮೋದಿ ಜೀ ಅವರು ಮೂರನೇ ಬಾರಿಗೆ ಪ್ರಧಾನಿಯಾದರೆ ನಮ್ಮ ಭವಿಷ್ಯದ ಮಕ್ಕಳು, ಹೆಣ್ಣ ಮಕ್ಕಳು ನಿರ್ಭೀತಿಯಿಂದ ಬಾಳಬಹುದು. ಅಲ್ಲಿ ಮೋದಿ ಜೀ ಅವರು ಪ್ರಧಾನಿ ಆಗಬೇಕು ಎಂದರೆ ಇಲ್ಲಿ ನೀವು ನನಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿ ಕಳುಹಿಸಬೇಕು. ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಮಾತ ನಾಡಿ, ಇದು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಅಲ್ಲ. ಲೋಕಸಭಾ ಚುನಾವಣೆ. ದೇಶದ ಚುನಾವಣೆ. ದೇಶದ ಚುಕ್ಕಾಣಿ ಯಾರು ಹಿಡಿಯಬೇಕು ಅನ್ನೋ ಚುನಾವಣೆ. ದೇಶದ ಒಳಿತಿಗಾಗಿ, ಅಭಿವೃದ್ಧಿಗಾಗಿ ತಾವೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡ ಬೇಕು. ಚನ್ನಗಿರಿ ತಾಲ್ಲೂಕಿನ ಮತದಾರರು ಹೆಚ್ಚನ ಸಂಖ್ಯೆಯಲ್ಲಿ ಗಾಯತ್ರಿ ಅಮ್ಮನವರಿಗೆ ಮತ ಚಲಾಯಿಸುವ ಮೂಲಕ ಮೋದಿ ಅವರ ಕೈಬಲ ಪಡಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡ, ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ಮಾತನಾಡಿ, ಈ ಬಾರಿ ವಿಕಸಿತ ಭಾರತ್, ಮತ್ತೊಮ್ಮೆ ಮೋದಿ ಎಂದು ಚುನಾವಣೆಗೆ ಹೋಗುತ್ತಿದ್ದೇವೆ. ಎಲ್ಲರೂ ಮೋದಿ ಮೋದಿ ಎಂದು ಪ್ರಭಾವಿತರಾಗಿದ್ದಾರೆ. ಮೋದಿ ಅವರು ನೀಡಿದ ಎಲ್ಲ ಯೋಜನೆಗಳನ್ನು ಸಾರ್ವಜನಿಕರು ಪಡೆದುಕೊಂಡಿದ್ದಾರೆ. ಎಲ್ಲ ವರ್ಗದವರು ಮೋದಿ ಅವರನ್ನು ಮೆಚ್ಚಿಕೊಂಡಿದ್ಧಾರೆ. ನಾವು ಕೂಡ ಪ್ರತಿ ಗ್ರಾಮದಲ್ಲಿರುವ ಎಲ್ಲ ವರ್ಗ, ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಾಯತ್ರಿ ಅಕ್ಕನವರಿಗೆ ಮತ ಹಾಕಿಸಬೇಕು ಎಂದು ಕರೆ ನೀಡಿದರು.

ಎತ್ತಿನ ಬಂಡಿಗೆ ಕೀಲು ಎಷ್ಟು ಮುಖ್ಯವೋ ಹಾಗೆಯೇ ಗ್ರಾಮದಲ್ಲಿರುವ ಸಣ್ಣ ಸಣ್ಣ ಸಮುದಾಯವೂ ನಮಗೆ ಮುಖ್ಯ. ನಮ್ಮ ಕಾರ್ಯಕರ್ತರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮತ ಹಾಕಿಸಬೇಕು. ಮತದಾನದವರೆಗೂ ಪ್ರತಿ ದಿನ ಗ್ರಾಮದಲ್ಲಿ ಮೋದಿ ಅವರ ಸಾಧನೆ, ಕೇಂದ್ರ ಸರ್ಕಾರದ ಯೋಜನೆ, ಸಂಸದ ಜಿ.ಎಂ. ಸಿದ್ದೇಶಣ್ಣನ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರತಿ ಮನೆ ಮನೆಗೂ ತಲುಪಿಸಬೇಕು ಎಂದು ಸಲಹೆ ನೀಡಿದರು.

ಮಂಡಲದ ಅಧ್ಯಕ್ಷರು, ಮಂಡಲದ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ ಚನ್ನಗಿರಿ ವಿಧಾನ ಸಭಾ ಕ್ಷೇತ್ರದ ಮುಖಂಡರು ಇದ್ದರು.

ಎಲ್ಲೆಲ್ಲಿ ಪ್ರಚಾರ: ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕರೇಕಟ್ಟೆ, ಕೆರೆಬಿಳಚಿ, ಸೋಮಲಾಪುರ, ಕೊಂಡದಹಳ್ಳಿ, ಕಾಕನೂರು, ನುಗ್ಗಿಹಳ್ಳಿ, ಚಿಕ್ಕಗಂಗೂರು, ಕೊರಟಿಕೆರೆ, ಹೆಬ್ಬಳಗೆರೆ, ಹೊದಿಗೆರೆ, ವಡ್ನಾಳ್, ಕಂಚಿಗನಾಳ್, ಮಲಹಾಳ್, ಗೊಪ್ಪೇನಹಳ್ಳಿ, ಪಾಂಡೋಮಟ್ಟಿ, ಮರವಂಜಿ, ನೆಲ್ಲಿಹಂಕಲು, ದುರ್ವಿಗೆರೆ, ತಾವರೆಕೆರೆ ಗ್ರಾಮಗಳಲ್ಲಿ ತೆರೆದ ವಾಹನದ ಮೂಲಕ ಪ್ರಚಾರ ನಡೆಸಿದರು.

error: Content is protected !!