ಮತದಾನ ಜಾಗೃತಿಗಾಗಿ ಸಿದ್ಧಗಂಗಾ ವಿದ್ಯಾರ್ಥಿಗಳ `ಕೈ ಗೊಂಬೆ’ ಆಟ

ಮತದಾನ ಜಾಗೃತಿಗಾಗಿ ಸಿದ್ಧಗಂಗಾ  ವಿದ್ಯಾರ್ಥಿಗಳ `ಕೈ ಗೊಂಬೆ’ ಆಟ

ದಾವಣಗೆರೆ, ಮೇ 6- ನಾಳೆ ದಿನಾಂಕ 7ರಂದು ಲೋಕಸಭೆ ಚುನಾವಣೆ ನಡೆಯಲಿದ್ದು,  ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಅವರ ನಾಯಕತ್ವದಲ್ಲಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ  ಡಾ. ಸುರೇಶ್ ಬಿ. ಇಟ್ನಾಳ್ ಅವರ ಮಾರ್ಗದರ್ಶನದಲ್ಲಿ ಮತದಾನ ಜಾಗೃತಿಗಾಗಿ ಹಲವಾರು ವಿನೂತನ ಕಾರ್ಯಕ್ರಮಗಳು ನಡೆದಿವೆ.

ಅವುಗಳಲ್ಲಿ `ಬನ್ನಿ ಮತ ಹಾಕೋಣ’ ಎಂಬ ಹೆಸರಿನ ಕೈ ಗೊಂಬೆಯಾಟ (ಪಪೆಟ್ ಶೋ) ಕೂಡಾ ಒಂದು. ವಿನೂತನ ಮತ್ತು ಕ್ರಿಯಾಶೀಲವಾಗಿ ಈ ಪಪೆಟ್ ಶೋ ಮೂಡಿ ಬಂದಿದೆ. ಹೋಟೆಲ್‍ನಲ್ಲಿ ಅದರ ಮಾಲೀಕ ರಾಮಣ್ಣ, ಗ್ರಾಹಕ ಭೀಮಣ್ಣ, ನಿವೃತ್ತ ಮುಖ್ಯೋಪಾಧ್ಯಾಯ ಶಿವಣ್ಣ ಇವರೊಂದಿಗೆ ಹೋಟೆಲ್‍ಗೆ ಬರುವ ತಾಯಿ ಮತ್ತು ಮಗಳು ಹೀಗೆ ಐವರ ನಡುವೆ ನಡೆಯುವ ಸರಳ ಸಂಭಾಷಣೆಯಲ್ಲಿ ಮತದಾನದ ಮಹತ್ವ ಮತ್ತು ಮತದಾನಕ್ಕಾಗಿ ಇರುವ ಅನುಕೂಲತೆಗಳ ಬಗ್ಗೆ ಅರ್ಥಪೂರ್ಣವಾಗಿ ಪ್ರಸ್ತುತ ಪಡಿಸಲಾಗಿದೆ.

ಒಟ್ಟು 12 ನಿಮಿಷಗಳ ಈ ಪಪೆಟ್ ಶೋ ನ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ವೀಕ್ಷಿಸಲು ಲಭ್ಯವಿದ್ದು, ಈಗಾಗಲೇ ಹಲವರು ಅದನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಇದರ ಮುಖ್ಯ ಆಕರ್ಷಣೆಯಾದ ಸುಂದರ ಗೊಂಬೆಗಳನ್ನು ಹೆಸರಾಂತ ಕಲಾವಿದ ನಾ.ರೇವನ್, ಯೋಗಿ ಪ್ರಸನ್ನ ಮತ್ತು ರಮೇಶ್ ಅವರುಗಳು ತಮ್ಮ ಕಲಾನೈಪುಣ್ಯದಿಂದ ರೂಪಿಸಿದ್ದಾರೆ. 

ಸಿದ್ಧಗಂಗಾ ವಿದ್ಯಾಸಂಸ್ಥೆ  ನಿರ್ದೇಶಕ  ಡಾ.ಜಯಂತ್‍ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಇದು ಮೂಡಿಬಂದಿದೆ. ಸಂಭಾಷಣೆಯನ್ನು ಶಿಕ್ಷಕ ಜಗನ್ನಾಥ ನಾಡಿಗೇರ್ ಬರೆದಿದ್ದಾರೆ. ಇವರಿಬ್ಬರೊಂದಿಗೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಿಕ್ಷಕರಾದ ಮಹೇಶ್, ಶಮಾಬಾನು ಮತ್ತು ಮೀನಾಕ್ಷಿ ಈ ಐವರು ಇದಕ್ಕೆ ಕಂಠದಾನ ಮಾಡಿದ್ದಾರೆ. ಇದರ ವಿಡಿಯೋ ಚಿತ್ರೀಕರಣ ಮತ್ತು ಸಂಕಲನವನ್ನು ಮನುಶ್ರೀ ಅವರು ನಿರ್ವಹಿಸಿದ್ದಾರೆ.  

ಸಿದ್ಧಗಂಗಾ  ವಿದ್ಯಾರ್ಥಿಗಳಾದ ಶರತ್, ವಿನಯ್‍ಕುಮಾರ್, ಸಲ್ಮಾನ್, ಕಲ್ಲೇಶ್ ಮತ್ತು ದೀಪಕ್ ಅವರುಗಳು ತಮ್ಮ ಕೈಗಳಿಂದ ಈ ಗೊಂಬೆಗಳಿಗೆ ಜೀವ ತುಂಬಿದ್ದಾರೆ. ಇಲ್ಲಿ ಕೊಟ್ಟಿರುವ ಯೂಟ್ಯೂಬ್ ಲಿಂಕನ್ನು ಬಳಸಿ  (https://youtu.be/KM3rkQu5nP4?si=BC9bBv3tnMhVkapL)  ಸಾರ್ವಜನಿಕರು ಈ ವಿಡಿಯೋವನ್ನು ವೀಕ್ಷಿಸಲು ಮತ್ತು ಅದನ್ನು ಇತರರಿಗೂ ಶೇರ್ ಮಾಡಲು ಕೋರಲಾಗಿದೆ.

error: Content is protected !!