ಚುನಾವಣಾ ಅಧಿಕಾರಿಗಳು ಆಯೋಗದ ಕಣ್ಣು-ಕಿವಿ

ಚುನಾವಣಾ ಅಧಿಕಾರಿಗಳು ಆಯೋಗದ ಕಣ್ಣು-ಕಿವಿ

ದಾವಣಗೆರೆ,ಮಾ.27- ನ್ಯಾಯ ಸಮ್ಮತ, ಪಾರದರ್ಶಕ ಚುನಾವಣೆ ನಡೆಸಲು ಚುನಾವಣಾ ಅಧಿಕಾರಿಗಳು ಆಯೋಗದ ಕಣ್ಣು, ಕಿವಿಯಾಗಿದ್ದು ಪ್ರಾಮಾಣಿಕವಾದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು. 

 ಅವರು ಬುಧವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವ ಲೆನ್ಸ್ ಟೀಮ್ ಮುಖ್ಯಸ್ಥರಿಗೆ ಏರ್ಪಡಿಸ ಲಾದ ಚುನಾವಣಾ ಕರ್ತವ್ಯಗಳು ಮತ್ತು ಕರ್ತವ್ಯದಲ್ಲಿದ್ದಾಗ ಅನುಸರಿಸಬೇಕಾದ ಕ್ರಮ, ನಿಯಮಗಳು, ಮಾದರಿ ನೀತಿ ಸಂಹಿತೆ ಅನುಷ್ಠಾನದ ಕುರಿತಂತೆ ಏರ್ಪಡಿಸಲಾದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

ಫ್ಲೈಯಿಂಗ್ ಸ್ಕ್ವಾಡ್‍ಗೆ ಕಾರ್ಯ ನಿರ್ವಾಹಕ ದಂಡಾಧಿಕಾರಿಯ ಅಧಿಕಾರ ನೀಡಲಾಗಿದೆ. ಯಾವುದೇ ಸಂದರ್ಭದಲ್ಲಿ ಚುನಾವಣಾ ಅಕ್ರಮಗಳ ಬಗ್ಗೆ ತನಿಖೆ ಮಾಡುವ ಅಧಿಕಾರ ನೀಡಲಾಗಿರುತ್ತದೆ. 

ಚುನಾವಣಾ ಉದ್ದೇಶಕ್ಕೆ ಹಂಚಿಕೆ ಮಾಡಲು ಸಂಗ್ರಹಿಸಲಾದ ಹಣ, ಮದ್ಯ, ಉಚಿತ ಕೊಡುಗೆಗಳಾದ ಸೀರೆ, ಶಾಲು, ಆಭರಣ, ಕೂಪನ್‍ಗಳು, ಕಿಚನ್ ವಸ್ತುಗಳು ಕಂಡು ಬಂದಲ್ಲಿ ವಶಕ್ಕೆ ಪಡೆದು ತನಿಖೆ ಮಾಡಿ ಅಕ್ರಮ ಎಂದಾದಲ್ಲಿ ಪ್ರಕರಣ ದಾಖಲಿಸುವ ಅಧಿಕಾರ ಇರುತ್ತದೆ ಮತ್ತು ಜನರಿಗೆ ಬೆದರಿಕೆಯುಂಟು ಮಾಡುವವರ ಮೇಲೆಯೂ ತನಿಖೆ ಮಾಡುವ ಅಧಿಕಾರ ಇರುತ್ತದೆ. ಇವರು ಪ್ರತಿನಿತ್ಯದ ವರದಿಯನ್ನು ಸಹಾಯಕ ಚುನಾವಣಾಧಿಕಾರಿಗಳಿಗೆ ನೀಡಬೇಕು. ಇವರು ತಮ್ಮ ಕರ್ತವ್ಯದಲ್ಲಿ ಯಾವುದೇ ಪಕ್ಷಪಾತ, ನಿರ್ಲಕ್ಷ್ಯತೆ ವಹಿಸುವಂತಿಲ್ಲ ಎಂದರು. 

 ಚೆಕ್‍ಪೋಸ್ಟ್‍ನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಆಯಾ ಮಾರ್ಗದಲ್ಲಿ ಸಾಗುವ ವಾಹನಗಳನ್ನು ತಪಾಸಣೆ ಮಾಡಿ ಕಳುಹಿಸಬೇಕು. ಯಾವುದೇ ಸರಕು ಮತದಾರರಿಗೆ ಹಂಚಿಕೆ ಮಾಡುವ ಉದ್ದೇಶ ಇದ್ದಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಬೇಕೆಂದು ತಿಳಿಸಿ ಪ್ರಕರಣ ದಾಖಲಿಸುವಾಗ ಇಎಸ್‍ಎಂಎಸ್‍ನಲ್ಲಿ ದಾಖಲು ಮಾಡಬೇಕೆಂದು ತಿಳಿಸಿದರು. 

 ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಜಾತಿ, ಧರ್ಮದ ಆಧಾರದಲ್ಲಿ ಪೋಸ್ಟ್ ಮಾಡುವವರ ಮೇಲೆ ನಿಗಾವಹಿಸಬೇಕು. ಎಫ್‍ಎಸ್‍ಟಿ, ಎಸ್‍ಎಸ್‍ಟಿ ತಂಡಗಳಿಗೆ ಬೇಕಾದ ಎಲ್ಲಾ ಬಂದೋಬಸ್ತ್ ಮತ್ತು ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ ಎಂದರು. 

ಚುನಾವಣಾ ವೆಚ್ಚ ಮೇಲ್ವಿಚಾರಣಾ ಸಮಿತಿ ನೋಡಲ್ ಅಧಿಕಾರಿ ಗಿರೀಶ್, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಂಜುನಾಥ್, ಅಬಕಾರಿ ಉಪ ಆಯುಕ್ತರಾದ ಟಿ.ವಿ.ಶೈಲಜ ಇತರರಿದ್ದರು.

error: Content is protected !!