ಬುದ್ದಿವಂತಿಕೆ ಜೊತೆ ಹೃದಯವಂತಿಕೆ ಅಗತ್ಯ: ಕೃಷ್ಣೇಗೌಡ

ಬುದ್ದಿವಂತಿಕೆ ಜೊತೆ ಹೃದಯವಂತಿಕೆ ಅಗತ್ಯ: ಕೃಷ್ಣೇಗೌಡ

ದಾವಣಗೆರೆ, ಮಾ.15- ಮಕ್ಕಳಿಗೆ ಬುದ್ದಿವಂತಿಕೆ ಜೊತೆಗೆ ಹೃದಯವಂತಿಕೆಯೂ ಅಗತ್ಯ ಎಂದು ಉಪನ್ಯಾಸಕರೂ, ವಾಗ್ಮಿಗಳೂ ಆದ ಪ್ರೊ.ಎಂ. ಕೃಷ್ಣೇಗೌಡ್ರು ಪ್ರತಿಪಾದಿಸಿದರು.

ನಗರದ ಶ್ರೀ ಸೋಮೇಶ್ವರ ವಿದ್ಯಾಲಯ ದಿಂದ ಶಾಲಾ ಆವರಣದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ `ಜನ್ಮಭೂಮಿ ಮತ್ತು ಜನ್ಮದಾತರಿಗೊಂದು ನಮನ’ ಹಾಗೂ `ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಂಪಾದನೆಗಾಗಿ ಬುದ್ಧಿವಂತರಾಗಬೇಕು ಎಂಬ  ಕಾಲವಿತ್ತು. ಆದರೆ ಈಗ ಬುದ್ದಿವಂತರಾಗುವ ಜೊತೆಗೆ ಹೃದಯವಂತರೂ ಆಗಬೇಕಿದೆ ಎಂದರು.

ಮಕ್ಕಳನ್ನು ಬುದ್ಧಿವಂತರನ್ನಾಗಿಸಲು ಪ್ರಯತ್ನಿಸಬೇಕೆಂದಿಲ್ಲ. ತಾವಾಗಿಯೇ ಆಗುತ್ತಾರೆ. ಆದರೆ ಎಲ್ಲಾ ಕಾಲಕ್ಕೂ ಅಗತ್ಯವಾಗಿರುವುದು ಹೃದಯವಂತಿಕೆ ಎಂದರು.

ಕಾಯಿಲೆ ಇರದಿರುವುದೇ ಆರೋಗ್ಯ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ದೇಹಾರೋಗ್ಯ, ಮಾನಸಿಕ ಆರೋಗ್ಯ ಜೊತೆ ಭಾವನಾತ್ಮಕ ಆರೋಗ್ಯ ಹಾಗೂ ಸಾಮಾಜಿಕ ಆರೋಗ್ಯವೂ ಮುಖ್ಯ ಎಂದು ಹೇಳಿದೆ.

ಮಕ್ಕಳಿಗೆ ದೇಹದ ಆರೋಗ್ಯದ ಜೊತೆ ಭಾವನಾತ್ಮಕ ಹಾಗೂ ಸಾಮಾಜಿಕ ಆರೋಗ್ಯವೂ ಇರುವಂತೆ ಪೋಷಕರು ನೋಡಿಕೊಳ್ಳಬೇಕಿದೆ. ಹೊರ ಜಗತ್ತಿನ ಸಂಪರ್ಕ ಇದ್ದಾಗ ಮಕ್ಕಳಲ್ಲಿ ನಮ್ಮವರು ಎಂಬ ಭಾವನೆ ಮೂಡುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಹೊರ ಜಗತ್ತಿನ ಸಂಪರ್ಕ ಕಡಿತಗೊಂಡಿದೆ. ಅದನ್ನು ಮತ್ತೆ ಬೆಸೆಯುವ ಪ್ರಯತ್ನ ಮಾಡಬೇಕಿದೆ ಎಂದರು.

ಮನೆಯಲ್ಲಿ ಹಜಾರದ ಬದಲು ಕೊಠಡಿಗಳು ಹೆಚ್ಚಾಗಿವೆ. ಮಕ್ಕಳದ್ದೇ ಪ್ರತ್ಯೇಕ ಕೊಠಡಿಗಳಾಗಿರುವುದರಿಂದ ಪೋಷಕರು-ಮಕ್ಕಳೊಂದಿಗಿನ ಸಂಪರ್ಕ ಕಡಿತವಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಕೊಠಡಿಗಳಲ್ಲೂ ಪ್ರವೇಶ ಇಲ್ಲವಾಗುವ ಸಾಧ್ಯತೆಗಳೂ ಇವೆ. ಹೀಗಾಗಿ ನಮಗೆ ಗೊತ್ತಿಲ್ಲದೆಯೇ ನಾವು ಮಕ್ಕಳೊಂದಿಗೆ ಬೇರೆಯಾಗುತ್ತಿದ್ದೇವೆ. ಇವೆಲ್ಲಾ ಹೊಸ ಜಗತ್ತಿನ ಸವಾಲುಗಳಾಗಿವೆ ಎಂದು ಎಚ್ಚರಿಸಿದರು.

ಭಾರತ ಎಂಬುದು ಕೇವಲ ಭೂಪಟವಲ್ಲ. ಇಲ್ಲಿನ ಜೀವನ, ಪರಂಪರೆ, ಸಂಸ್ಕೃತಿ ಮಕ್ಕಳ ಕಣ್ಣಿಗೆ ಬೀಳಬೇಕಿದೆ. ಭಾರತ ಎಂದರೆ ಅದೊಂದು ತತ್ವ. ಹೀಗಾಗಿಯೇ ನಾವು ಭಾರತ ಮಾತೆ ಎನ್ನುತ್ತೇವೆ. ಈ ದೇಶದ ತತ್ವ, ಪ್ರೀತಿ, ಗೌರವವನ್ನು ಮಕ್ಕಳು ಅರಿಯಬೇಕಿದೆ. ಇಂದಿನ ಮಾತೃಪೂಜೆಯ ತತ್ವವೂ ಇದೇ ಆಗಿದೆ. ಮಾತೃತ್ವ ಗೌರವಿಸುವುದನ್ನು ಮಕ್ಕಳಿಗೆ ಕಲಿಸಬೇಕಿದೆ ಎಂದರು.

ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಕು.ಭೂಮಿಕಾ ಜಿ.ವಿ.  ಹಾಗೂ ಚಿ.ಕೀರ್ತನ್ ರಾಜ್ ಜಕನೂರ್ ಅವರಿಗೆ ಸಾಧನಾ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

4ನೇ ತರಗತಿ ವಿದ್ಯಾರ್ಥಿ ಕು.ಸುಧನ್ವ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. 10ನೇ ತರಗತಿ ವಿದ್ಯಾರ್ಥಿನಿ ಕು. ಸೃಜನಾ ವೈ.ಎಂ. ಶಾಲೆಯ ಕುರಿತು ಅನಿಸಿಕೆ ಹಂಚಿಕೊಂಡರು.

ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಪರಮೇಶ್ವರಪ್ಪ, ಶ್ರೀಮತಿ ವೀಣಾ ಸುರೇಶ್, ಸಂಸ್ಥೆಯ ಸಂಸ್ಥಾಪಕ ಕೆ.ಎಂ. ಸುರೇಶ್, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಉಪಸ್ಥಿತರಿದ್ದರು. ಅಭಿಜ್ಞಾ ಹಾಗೂ ಸ್ನೇಹಿತರು ಪ್ರಾರ್ಥಿಸಿದರು. ಕು.ರಮ್ಯಾ ಕೆ.ಎಸ್. ಸ್ವಾಗತಿಸಿದರು. ಶ್ರೀಮತಿ ಕಮಲಾ ನಿರೂಪಿಸಿದರು.

error: Content is protected !!