ಕೊರೊನಾ ಆಪರೇಷನ್ನೂ, ಆರ್ಥಿಕತೆ ಎಂಬ ರೋಗಿಯೂ

ಈವರ್ಷ ದೇಶದ ಆರ್ಥಿಕ ವ್ಯವಸ್ಥೆ ಶೇ.6ರಿಂದ 9ರವರೆಗೆ ಕುಸಿಯಲಿದೆ ಎಂದು ಬಿಜೆಪಿ ಸಂಸದ ಸುಬ್ರಮಣ್ಯಂ ಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇದರ ಅರ್ಥ ದೇಶದ ಕೋಟ್ಯಂತರ ಜನರು ಒಂದೇ ವರ್ಷದಲ್ಲಿ ಬಡತನಕ್ಕೆ ದೂಡಲ್ಪಡ ಲಿದ್ದಾರೆ, ಒಂದು ಹೊತ್ತು ಊಟಕ್ಕೂ ಪರದಾ ಡಲಿದ್ದಾರೆ, ಅವರ ಮಕ್ಕಳ ಭವಿಷ್ಯ ಅತಂತ್ರ ವಾಗಲಿದೆ, ಮನೆ – ಮಠ ಕಳೆದುಕೊಳ್ಳ ಲಿದ್ದಾರೆ. ಉದ್ಯಮಗಳಿಗೆ ಬೀಗ ಬೀಳಲಿದೆ, ಸರಕುಗಳ ಬೇಡಿಕೆ ಕುಸಿದು ವ್ಯಾಪಾರ – ವಹಿವಾಟಿಗೆ ಭಾರೀ ಹೊಡೆತ ಬೀಳಲಿದೆ…

ಹೀಗೆ ಆರ್ಥಿಕ ಸಂಕಷ್ಟಗಳನ್ನು ಪಟ್ಟಿ ಮಾಡುತ್ತಲೇ ಸಾಗಬಹುದು. ಆದರೆ, ನನ್ನ ದೂರು ಈ ಬಗ್ಗೆ ಅಲ್ಲ. ನನ್ನ ದೂರು ಇದ್ಯಾವುದೂ ಯಾಕೆ ದಿನವಿಡೀ §ಬ್ರೇಕಿಂಗ್ ನ್ಯೂಸ್’ ಆಗುತ್ತಿಲ್ಲ ಎಂಬುದು. ಒಬ್ಬ ಉದ್ಯಮಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದು ಯಾಕೆ ಹೆಡ್‌ಲೈನ್‌ ಸುದ್ದಿ ಆಗುವುದಿಲ್ಲ ಎಂಬುದು. ದಿನಕ್ಕಿಷ್ಟು ಜನರಿಗೆ ಕೊರೊನಾ ಬಂತು ಎಂಬುದು ಬ್ರೇಕಿಂಗ್ ಆಗುವ ರೀತಿಯಲ್ಲೇ, ದಿನಕ್ಕಿಷ್ಟು ಲಕ್ಷ ಜನರು ಉದ್ಯೋಗ ಕಳೆದುಕೊಂಡರು ಎಂಬುದು ಯಾಕೆ ಬ್ರೇಕಿಂಗ್ ಆಗುತ್ತಿಲ್ಲ? ಎಂಬುದೇ ಪ್ರಶ್ನೆ.

ವಿಶ್ವದ ಯಾವುದೇ ಅಭಿವೃದ್ಧಿ ಹೊಂದಿದ ದೇಶಗಳು ಕಂಡೂ ಕಾಣದ ರೀತಿಯ ಲಾಕ್‌ ಡೌನ್‌ ಅನ್ನು ಭಾರತದಲ್ಲಿ ಹೇರಲಾಯಿತು. ಅಷ್ಟು ಸಾಲದು ಎಂಬಂತೆ ಭಾನುವಾರ ಕ್ಕೊಂದು ಮಿನಿ ಲಾಕ್‌ಡೌನ್‌. ಸಂಜೆ ವೇಳೆ ಹನಿ ಲಾಕ್‌ಡೌನ್‌. ಇಷ್ಟೆಲ್ಲ ಅಧಿಕೃತ ಲಾಕ್‌ಡೌನ್‌ ನಡುವೆ, ನಗರದ ಮಾರುಕಟ್ಟೆ ಯಲ್ಲಿ ಸಂಜೆ 6 ಗಂಟೆ ನಂತರ ಬೀದಿ ಅಂಗಡಿ ಗಳನ್ನು ಬಂದ್ ಮಾಡುವಂತೆ ಹೇಳಲಾಗುತ್ತದೆ ಎಂಬ ಗಾಳಿ ಸುದ್ದಿಯೂ ಹರಡುತ್ತಿದೆ.

ಇಷ್ಟೆಲ್ಲಾ ಲಾಕ್‌ ಮಾಡಿದ ಮೇಲೆ ಆರ್ಥಿಕತೆಯ ಗತಿ ಏನಾಯಿತು? ದೇಶದ ಆರ್ಥಿಕತೆಯೂ ಈಗ ಅನಾಥ ಸ್ಥಿತಿಗೆ ತಲುಪಿದೆ ಎಂದು ಆಗಾಗ ಯೋಚನೆ ಬರುತ್ತಿದೆ. ಆರ್ಥಿಕತೆಯೇನು ಬಿಡಿ ಕೊರೊನಾ ಮುಗಿದ ಮೇಲೆ ಪುಟಿದು ಬಿಡುತ್ತದೆ ಎಂದುಕೊಂಡರೆ ಅದರಷ್ಟು ಮೂರ್ಖತನ ಮತ್ತೊಂದಿಲ್ಲ. ಅಮೆರಿಕದಂತಹ ದೇಶದಲ್ಲೇ ಅರ್ಧದಷ್ಟು ಜನರಿಗೆ, ಕೊರೊನಾದಿಂದ ಕಳೆದು ಹೋದ ಕೆಲಸ ಮತ್ತೆ ದಕ್ಕುವ ವಿಶ್ವಾಸವಿಲ್ಲ ಎಂದು ಎಪಿ – ಎನ್‌ಒಆರ್‌ಸಿ ಸಮೀಕ್ಷೆ ತಿಳಿಸಿದೆ. ಇನ್ನು ನಮ್ಮ ಕಥೆ ಹೇಳಬೇಕೇ?

20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ ಮಾಡಿದ ತಕ್ಷಣ ಆರ್ಥಿಕತೆ ಧುತ್ ಎಂದು ಚೇತರಿಸಿಕೊಳ್ಳುವುದಿಲ್ಲ. ಚೀನಾದ ಉದ್ಯಮಿಗಳೇ ಇಲ್ಲಿ ಬನ್ನಿ ಎಂದು ಕರೆದ ತಕ್ಷಣ ಅಲ್ಲಿರುವವರೇನೂ ಇಲ್ಲಿಗೆ ಬರುವುದಿಲ್ಲ.

ಜೀವಕ್ಕಿಂತ ಹಣ ಮುಖ್ಯವಲ್ಲ ಎಂದು ನಮ್ಮಲ್ಲಿ ಕೆಲವರು ಆಗಾಗ ವೇದಾಂತಿ ರಾಗ ಹಾಡುತ್ತಾರೆ. ಅದಕ್ಕಿಂತ ದೊಡ್ಡ ಮೂರ್ಖತನ ಇನ್ನೊಂದಿಲ್ಲ. ಹಣದಿಂದಲೇ ಬಹುತೇಕ ಎಲ್ಲವನ್ನೂ ಹೊಂದಬಹುದು. ಉಡುವ ಬಟ್ಟೆ, ತಿನ್ನುವ ಅನ್ನ, ಕಾಯಿಲೆ ಬಂದರೆ ಬೇಕಾದ ಗುಳಿಗೆ, ಸತ್ತರೆ ಹೊದಿಸುವ ಬಿಳಿ ಬಟ್ಟೆಯವರೆಗೂ ಎಲ್ಲವೂ ದುಡ್ಡಿನಿಂದಲೇ ಬರಬೇಕು. ಆ ದುಡ್ಡನ್ನು ದೇಶ ದುಡಿಯುವ ವ್ಯವಸ್ಥೆಯೇ ಆರ್ಥಿಕತೆ.

ಅಂತಹ ಆರ್ಥಿಕತೆಯೇ ಬೇಡ, ಕೊರೊನಾ ವಿರುದ್ಧ ಗೆದ್ದರಷ್ಟೇ ಸಾಕು ಎನ್ನುವುದಾದರೆ ನಾವು ನಿಂತ ಟೊಂಗೆಯನ್ನೇ ಕಡಿದುಕೊಂಡಂತೆ. ಆದರೆ, ನಮ್ಮಲ್ಲಿ ಬಹುತೇಕ ಅಧಿಕಾರಸ್ಥರು ಆರ್ಥಿಕತೆಯ ಮೌಲ್ಯವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. 

ಕೊರೊನಾ ಆರಂಭದ ದಿನಗಳಲ್ಲಿ ಭಾವಿಸಿದಷ್ಟು ಕ್ರೂರವಲ್ಲ ಎಂಬುದು ಇತ್ತೀಚೆಗೆ ಎಲ್ಲರಿಗೂ ಸ್ಪಷ್ಟವಾಗುತ್ತಿದೆ. ದೆಹಲಿಯಲ್ಲಿ ಸರ್ಕಾರವೇ ನಡೆಸಿದ ಸೆರೋ – ಪ್ರಿವೆಲೆನ್ಸ್ ಸಮೀಕ್ಷೆಯ ಪ್ರಕಾರ ಸುಮಾರು 44 ಲಕ್ಷ ಜನರಿಗೆ ಕೊರೊನಾ ಬಂದಿದ್ದೂ ಗೊತ್ತಿಲ್ಲ, ಹೋಗಿದ್ದೂ ಗೊತ್ತಿಲ್ಲ.

ಅತಿ ವಿಕೋಪ ಎಂದಾದರೆ ದೇಶದ ಶೇ.1ರಷ್ಟು ಜನರು ಕೊರೊನಾದಿಂದ ಸಾವನ್ನಪ್ಪ ಬಹುದು. ಆದರೆ, ಆರ್ಥಿಕತೆ ಮುಗ್ಗರಿಸಿದರೆ ದೇಶ ಹಿಂದೆಂದೂ ಕಂಡರಿಯದ ಭೀಕರತೆಗೆ ದೂಡಲ್ಪ ಡಲಿದೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಕೊರೊನಾ ಒಂದೇ ಸಮಸ್ಯೆ ಅಲ್ಲ. ಹಾಗೇ ನಾದರೂ ಆಗಿದ್ದರೆ ಎಲ್ಲರೂ ನೆಮ್ಮದಿಯಾಗಿ ಕೊರೊನಾ ಒಂದರ ಬಗ್ಗೆಯೇ ಯೋಚಿಸ ಬಹುದಿತ್ತು. 

ಕೊರೊನಾ ಎದುರಿಸಲು ಲಾಕ್‌ಡೌನ್‌ ಮೂಲಕ ಆರ್ಥಿಕತೆಗೆ ಹೊಡೆತ ನೀಡುವುದೇ ಪರಿಹಾರವಲ್ಲ. ಉತ್ತಮ ಆರೋಗ್ಯ ಸೇವೆ, ತ್ವರಿತ ಟೆಸ್ಟಿಂಗ್ ವ್ಯವಸ್ಥೆ, ಸಾಮಾಜಿಕ ಅಂತರದಲ್ಲಿ ಜನ ಜಾಗೃತಿ ಮುಂತಾದ ಕ್ರಮಗಳನ್ನು ತೆಗೆದುಕೊಂಡರೆ ಆರ್ಥಿಕತೆಯ ಜೊತೆಗೆ ಕೊರೊನಾವನ್ನೂ ಗೆಲ್ಲಬಹುದು.

ಆಪರೇಷನ್ ಯಶಸ್ಸಾಯಿತು, ರೋಗಿ ಮಾತ್ರ ಸತ್ತ ಎಂಬ ಮಾತಿದೆ. ಕೊರೊನಾ ವಿರುದ್ಧ ಕಠಿಣ ನಿರ್ಬಂಧಗಳ ಹೋರಾಟ ನಡೆಸಲು ಹೊರಟರೆ, ಪರಿಸ್ಥಿತಿ ಇನ್ನೂ ಕಠಿಣವಾಗಬಹುದು. ಅತ್ತ ಆಪ ರೇಷನ್ನೂ ಯಶಸ್ವಿಯಾಗಲಿಲ್ಲ, ಇತ್ತ ರೋಗಿಯೂ ಉಳಿಯಲಿಲ್ಲ ಎಂಬ ಪರಿಸ್ಥಿತಿ ಬರಬಾರದು.


ಅಸ್ಮಿತ ಎಸ್. ಶೆಟ್ಟರ್

error: Content is protected !!