ನಮಗೆ ಆಹಾರ ಬೇಕು, ತಂಬಾಕು ಅಲ್ಲ… ವಿಶ್ವ ತಂಬಾಕು ರಹಿತ ದಿನ

ನಮಗೆ ಆಹಾರ ಬೇಕು, ತಂಬಾಕು ಅಲ್ಲ… ವಿಶ್ವ ತಂಬಾಕು ರಹಿತ ದಿನ

ತಂಬಾಕು ಸೇವನೆ ತಮ್ಮ ವೈಯಕ್ತಿಕ ಆರೋಗ್ಯವಲ್ಲದೆ, ಸಾಮಾಜಿಕ ಸ್ವಾಸ್ಥ್ಯಕ್ಕೂ ಹಾನಿಕಾರಕ.
ತಂಬಾಕಿನಿಂದ ದೂರ ಇರಲು ಸಂಕಲ್ಪ ಮಾಡೋಣ.
ಸ್ವಚ್ಛ ಹಾಗೂ ಸ್ವಾಸ್ಥ್ಯ ಸಮಾಜವನ್ನು ಕಟ್ಟೋಣ. 

2023 ರ ವಿಶ್ವ ತಂಬಾಕು ರಹಿತ ದಿನದ ಮೂಲ ಘೋಷ ವಾಕ್ಯ  “ನಮಗೆ ಆಹಾರ ಬೇಕು, ತಂಬಾಕು ಅಲ್ಲ”.  ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು  ನಮಗೆ  ಆಹಾರ ಬೇಕೇ ವಿನಃ ತಂಬಾಕು ಅಲ್ಲ ಎಂಬ ಕಟು ಸತ್ಯವನ್ನು ವಿಶ್ವದ ಜನತೆ  ಅರ್ಥ ಮಾಡಿಕೊಳ್ಳಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಆರೋಗ್ಯ ಸಂಪಾದನೆಗೆ ಪ್ರಥಮ ಆದ್ಯತೆ ನೀಡಬೇಕೇ ಹೊರತು,  ಇತರೆ  ಯಾವುದೇ ದುಶ್ಚಟಗಳಿಗಲ್ಲ. ಯಾರೊಬ್ಬರೂ ದುಶ್ಚಟಗಳ ದಾಸನಾಗ ಬಾರದು. ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಕೂಡ ಅದರ ಸೇವನೆ ಮಾಡುವವರೇ ಹೆಚ್ಚು.

ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟ್, ಹೊಗೆಸೊಪ್ಪು, ಗುಟ್ಕಾ, ಹುಕ್ಕಾ ಹಾಗೂ ಇನ್ನು ಮುಂತಾದವುಗಳು  ಆರೋಗ್ಯದ ಮೇಲೆ   ಕೆಟ್ಟ  ಪರಿಣಾಮಗಳನ್ನು ಬೀರುತ್ತ ವೆಂಬ ಸ್ಪಷ್ಟ ಅರಿವಿದ್ದರೂ ಅವುಗಳನ್ನು ಬಿಡ ಲಾರದೇ ಇರುವವರು ಅತಿ ವಿರಳ. ಅನೇಕ  ಜನ ಒತ್ತಡವನ್ನು ನಿಯಂತ್ರಿಸಿಕೊಳ್ಳಲು, ಇತರ ರೊಂದಿಗೆ  ಸಂತೋಷ ಹಾಗೂ ದುಃಖ ಹಂಚಿ ಕೊಳ್ಳಲು, ಮತ್ತೆ ಕೆಲವರು ತಮ್ಮ ಘನತೆಯನ್ನು ಎತ್ತಿ ತೋರಿಸಲು, ಇನ್ನೂ ಕೆಲವರು ಫ್ಯಾಷನ್ ಗಾಗಿ ತಂಬಾಕು  ಸೇವನೆ ಮಾಡುವರು. ಅದರಲ್ಲೂ ಕೆಲವರು  ಊಟ, ನಿದ್ರೆ ಬಿಟ್ರು ಬಿಟ್ಟೇನು ಇವುಗಳನ್ನು ಬಿಡುವುದಿಲ್ಲವೆನ್ನು ವವರೂ ಇದ್ದಾರೆ. ಇಂತಹವರ  ಮನಸ್ಸುಗಳನ್ನು ಸ್ವಲ್ಪ ಮಟ್ಟಿಗಾದರೂ ಬದಲಾಯಿಸಲು, ಇದರ ಬಳಕೆಯ ವಿರುದ್ಧ ಹೋರಾಡಲು, ಅತಿ ಹೆಚ್ಚು ತಂಬಾಕು ಸೇವಿಸುವುದರಿಂದ ಆರೋ ಗ್ಯದ ಮೇಲೆ ಉಂಟಾಗುವ ಪರಿಣಾಮಗಳ  ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ತಿಳಿವಳಿಕೆ ಮೂಡಿಸುವ ಸಲುವಾಗಿ  ಈ ದಿನವನ್ನು ಆಚರಿಸುವ ಪರಿಪಾಠ  1988 ರಿಂದ  ವಿಶ್ವ ಆರೋಗ್ಯ ಸಂಸ್ಥೆಯ  ನಿರ್ದೇಶನದ ಮೇರೆಗೆ ಜಾರಿಗೆ ಬಂದಿತು .

ವಿಶ್ವದಾದ್ಯಂತ  ತಂಬಾಕು ಉತ್ಪನ್ನಗಳಿಂದ ಪ್ರತಿ ವರ್ಷ 8 ದಶಲಕ್ಷಕ್ಕಿಂತ  ಹೆಚ್ಚು ಜನ ಸಾವಿಗೀಡಾಗುತ್ತಿದ್ದು,1.8 ಮಿಲಿಯನ್ ನಷ್ಟು ಜನ ಶ್ವಾಸಕೋಶದ ಕ್ಯಾನ್ಸರ್‌ನಿಂದ ಸಾವಿಗೀಡಾಗುತ್ತಿರು ವರು. ಚೀನಾ ಹೊರತುಪಡಿಸಿದರೆ ಭಾರತದಲ್ಲಿ ಅತೀ ಹೆಚ್ಚು ತಂಬಾಕು ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ, ಅಷ್ಟೇ ಅಲ್ಲದೆ, ನಮ್ಮ ದೇಶದಲ್ಲಿ 267 ಮಿಲಿಯನ್ ಯುವಕರು ತಂಬಾಕು ಸೇವನೆಯ ದಾಸರಾಗಿದ್ದಾರೆ. 

ತಂಬಾಕು ಉತ್ಪನ್ನಗಳು ಪರಿಸರದ ಮೇಲೆ ಬೀರುವ  ಕೆಟ್ಟ ಪರಿಣಾಮಗಳೆಂದರೆ :  

* ತಂಬಾಕು ಬೆಳೆಗೆ ಹೆಚ್ಚಿನ ಕೀಟನಾಶಕ ಹಾಗೂ ಗೊಬ್ಬರ ಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. * ತಂಬಾಕು ಬೆಳೆದ ಜಾಗದಲ್ಲಿ ಬೇರೆ ಬೆಳೆ ತೆಗೆಯುವುದು ಕಷ್ಟವಾಗುತ್ತದೆ. *  ಪ್ರತಿ 300 ಸಿಗರೇಟ್ ತಯಾರಿಕೆಗೆ ಒಂದು ಮರವನ್ನು ಕಡಿಯಲಾಗುತ್ತದೆ. * ತಂಬಾಕು ಬೆಳೆಗೆ ಹೆಚ್ಚಿನ ನೀರು ಪೋಲಾಗುತ್ತದೆ. * ಜಾಗತಿಕವಾಗಿ ಪ್ರತಿ ವರ್ಷ ಸುಮಾರು 35 ಲಕ್ಷ ಹೆಕ್ಟೇರ್ ಭೂಮಿ ನಾಶವಾಗುತ್ತದೆ. * ಈ ಕೃಷಿಯು ವಾರ್ಷಿಕವಾಗಿ 84 ಮೆಗಾಟನ್ CO2 ಹೊರಸೂಸುವಿಕೆಯನ್ನು ಉತ್ಪಾದಿಸುತ್ತದೆ. ಹೀಗಿದ್ದರೂ ಅದನ್ನು ಬೆಳೆಯುವವರ ಸಂಖ್ಯೆ ಏನೂ ಕಡಿಮೆಯಾಗಿಲ್ಲ.

 ತಂಬಾಕು ಸೇವನೆಯಿಂದ ಉಂಟಾಗುವ  ಪರಿಣಾಮಗಳು : 

ತಂಬಾಕು ಸೇವನೆಯಿಂದ ಶ್ವಾಸಕೋಶ, ಧ್ವನಿ ಪೆಟ್ಟಿಗೆ, ಬಾಯಿ ಹಾಗೂ ಗಂಟಲಿನ ಕ್ಯಾನ್ಸರ್  ಅಲ್ಲದೆ ಮೂತ್ರಪಿಂಡ, ಯಕೃತ್, ಮೇದೋಜ್ಜೀರಕ ಗ್ರಂಥಿ,  ಹೃದಯದ ಮೇಲೆ ಪರಿಣಾಮ ಬೀರುವುದಲ್ಲದೆ,  ಪಾರ್ಶ್ವವಾಯು, ದೃಷ್ಟಿ ಮಾಂದ್ಯತೆ,  ಕಿವುಡುತನ, ಬಾಯಿಯ ದುರ್ವಾಸನೆ, ಶಕ್ತಿಹೀನತೆ, ಹಲ್ಲಿನ ತೊಂದರೆಯ ಜೊತೆಗೆ ಸಂತಾನೋತ್ಪತ್ತಿಯ ಮೇಲೆ  ಪರಿಣಾಮ ಬೀರುವುದರ ಜೊತೆಗೆ  ರೋಗ ನಿರೋಧಕ ಶಕ್ತಿಯನ್ನು  ಕುಗ್ಗಿಸುವುದು ಹಾಗೂ  ಮಾನಸಿಕ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವುದು. ಒಂದು ಅಂದಾಜಿನ ಪ್ರಕಾರ  ಒಮ್ಮೆ ಸಿಗರೇಟ್ ಸೇದುವುದರಿಂದ ನಮ್ಮ ಜೀವನದ ಹನ್ನೊಂದು ನಿಮಿಷಗಳಷ್ಟು ಅಮೂಲ್ಯ ಆಯುಷ್ಯವನ್ನು ಕಳೆದುಕೊಳ್ಳುತ್ತೇವೆ.

ವಿಶ್ವದಲ್ಲಿ ನೌರು (52.1%) ತಂಬಾಕು ಸೇವನೆಯಲ್ಲಿ ಪ್ರಥಮ ಸ್ಥಾನ ಗಳಿಸಿದರೆ, ಘಾನಾ (3.7%) ದೇಶ ಕನಿಷ್ಠ ಸ್ಥಾನವನ್ನು ಪಡೆದಿದೆ.  ಭಾರತದಲ್ಲಿ ಶೇ.27 ರಷ್ಟು ಜನ ತಂಬಾಕು ಸೇವಿಸುತ್ತಿದ್ದು, ವಾರ್ಷಿಕವಾಗಿ ಇದರಿಂದ 1.35 ಮಿಲಿಯನ್ ಜನ ಸಾವಿಗೀಡಾಗುತ್ತಿರುವರು. ಅಲ್ಲದೆ ದೇಶದಲ್ಲಿ ಪ್ರತಿ ಎರಡು ನಿಮಿಷಕ್ಕೆ ಮೂರು ಜನ ತಂಬಾಕು ಸೇವನೆಯಿಂದ ಮರಣ ಹೊಂದುತ್ತಿರುವರು. ಇದಲ್ಲದೆ Second hand smokers ಗಳ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವನ್ನು ಕಾಣಬಹುದು.  ದೇಶದ ಛತ್ತೀಸ್‌ಘಡದಲ್ಲಿ ಅತಿ ಹೆಚ್ಚು ಅಂದರೆ ಶೇ.39.1 ರಷ್ಟು ಮಂದಿ ತಂಬಾಕು ಸೇವಿಸಿದರೆ, ಕೊಲ್ಕೋತ್ತಾ smoke city ಎಂಬ ಹೆಸರಿಗೆ ಖ್ಯಾತವಾಗಿದೆ. ಹಿಮಾಚಲ ಪ್ರದೇಶವು ದೇಶದ ಮೊದಲ ತಂಬಾಕು ಮುಕ್ತ ರಾಜ್ಯವೆಂದು ಹೆಸರು ಗಳಿಸಿದರೆ, ಮಿಜೋರಾಮ್ ನಲ್ಲಿ ಧೂಮಪಾನ ಮಾಡುವಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದೆ (16.1%) ಇರುವರೆಂಬುದು  ತಿಳಿದುಬಂದಿದೆ.

ತಂಬಾಕು ತ್ಯಜಿಸುವುದರಿಂದ ಆಗುವ ಅನುಕೂಲಗಳು :

* ಆರೋಗ್ಯ ಮತ್ತು ಜೀವನದ  ಗುಣಮಟ್ಟದಲ್ಲಿ ಸುಧಾರಣೆ * ಹತ್ತು ವರ್ಷದಷ್ಟು ಸಾವನ್ನು ಮುಂದೂಡಬಹುದು. * ಕಳಪೆ ಸಂತಾನೋತ್ಪತ್ತಿಯನ್ನು ದೂರ ಮಾಡುವುದು * ಆರ್ಥಿಕ ಹೊರೆಯನ್ನು ತಗ್ಗಿಸುವುದು. * ಉಸಿರಾಟದ ಸೋಂಕುಗಳನ್ನು ಕಡಿಮೆ ಮಾಡುವುದು. * ಶ್ವಾಸಕೋಶದ ಕಾರ್ಯನಿರ್ವಹಣೆಯನ್ನು   ಸುಧಾರಿಸುವುದು. * ಪಾರ್ಶ್ವ ವಾಯುವಿನಿಂದ ಉಂಟಾಗುವ  ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವುದು. ಪ್ರತಿ ವರ್ಷ ಮೇ 31 ರಂದು ಮಾತ್ರ ತಂಬಾಕು ರಹಿತ ದಿನ ಆಚರಿಸದೆ, ವರ್ಷದ ಎಲ್ಲಾ ದಿನ ಗಳಂದು ಈ ದಿನವನ್ನು ಆಚರಿಸಿದಲ್ಲಿ  ಸದೃಢ ಹಾಗೂ ಆರೋಗ್ಯಯುತ ಸಮಾಜ ವನ್ನು ನಿರ್ಮಾಣ ಮಾಡಲು ಸಾಧ್ಯ. ಎಲ್ಲಾ ವಯಸ್ಸಿನ ವ್ಯಕ್ತಿಗಳು ನಾನು ಇಂದಿನಿಂದ  ಯಾವುದೇ ತಂಬಾಕು  ಉತ್ಪನ್ನಗಳನ್ನು ಸೇವಿಸುವುದಿಲ್ಲವೆಂಬ  ಪ್ರತಿಜ್ಞೆ ಕೈಗೊಂಡಲ್ಲಿ  ಮಾತ್ರ ತಂಬಾಕು ಮುಕ್ತ ಸಮಾಜವನ್ನು ನಿರ್ಮಿಸ ಬಹುದು. ಅದರಂತೆ ಧೂಮಪಾನ ಮಾಡುವವರ ಮನವೊಲಿಸಲು ತಂಬಾಕು ವ್ಯಸನ ಮುಕ್ತ ಕೇಂದ್ರಗಳನ್ನು ಸ್ಥಾಪಿಸಿ ತನ್ಮೂಲಕ ಅವರಿಗೆ ತರಬೇತಿ ಕೊಡು ವಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಬನ್ನಿ ನಾವೆಲ್ಲರೂ ತಂಬಾಕು ರಹಿತ ಮನೆ, ಸಮಾಜ ಹಾಗೂ ಸಮುದಾಯವನ್ನು ನಿರ್ಮಾಣ ಮಾಡೋಣ. ನಾನು ತಂಬಾಕು ಬಳಕೆ ಮಾಡುವುದಿಲ್ಲ, ಬೇರೆಯವರಿಗೂ ಬಳಕೆ ಮಾಡಲು ಬಿಡುವುದಿಲ್ಲವೆಂಬ ಒಗ್ಗಟ್ಟಿನ ಮಂತ್ರವನ್ನು ಜಪಿಸೋಣ.


ಡಾ. ಶಿವಯ್ಯ ಎಸ್
ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.
[email protected]

error: Content is protected !!