ವಚನಗಳು ಭಾಷಣಕ್ಕಲ್ಲದೇ, ಜೀವನಕ್ಕೆ ಅಳವಡಿಕೆಯಾಗಬೇಕು

ವಚನಗಳು ಭಾಷಣಕ್ಕಲ್ಲದೇ,  ಜೀವನಕ್ಕೆ ಅಳವಡಿಕೆಯಾಗಬೇಕು

ಕೊಟ್ಟೂರು, ಫೆ. 3- ಭಾಷಣ, ಕಂಠಪಾಠ ಹಾಗೂ ಅಧ್ಯಯನಕ್ಕೆ ಮಾತ್ರ ವಚನಗಳು ಸೀಮಿತವಾಗದೇ ಜೀವನದಲ್ಲೂ ಅಳವಡಿಕೆಯಾಗಬೇಕು ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಕರೆ ನೀಡಿದರು.

ತರಳಬಾಳು ಹುಣ್ಣಿಮೆ ಮಹೋತ್ಸವದ ಏಳನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಶರಣರು ವಚನಗಳ ಸಂದೇಶ ನೀಡಿ 800 ವರ್ಷ ಗಳಾದವು. ಸ್ವಾತಂತ್ರ್ಯ ದೊರೆತು 75 ವರ್ಷವಾಯಿತು. ಆದರೂ, ಮಹಿಳೆಯರಿಗೆ ಸಿಗಬೇಕಾದ ಸ್ಥಾನಮಾನ ಇನ್ನೂ ಸಿಕ್ಕಿಲ್ಲ. ಶ್ರೇಣೀಕೃತ ಹಾಗೂ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂದವರು ವಿಷಾದಿಸಿದರು.

ರಾಜೀವ್ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿದ್ದ ಸಮಯದಲ್ಲಿ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸಿದರು. ಆ ಕಾರಣಕ್ಕಾಗಿ ರಾಜಕೀಯದಲ್ಲಿ ಮಹಿಳೆಯರಿಗೆ ರಾಜಕೀಯವಾಗಿ ಕೆಲ ಸ್ಥಾನಗಳು ದೊರೆತಿವೆ. ಆದರೆ, ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಸಿಗಬೇಕಾದ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದವರು ತಿಳಿಸಿದರು.

ಮಹಿಳೆಯರ ಸ್ಥಾನಮಾನ ಕುರಿತು ಶರಣರು ವಚನಗಳಲ್ಲಿ ತಿಳಿಸಿರುವ ಆಶಯಗಳನ್ನು ಜಾರಿಗೆ ತರಲು ವಿಶೇಷ ಚರ್ಚೆಗಳು ನಡೆಯಬೇಕಿದೆ ಹಾಗೂ ಆತ್ಮವಲೋಕನ ಮಾಡಿಕೊಳ್ಳಬೇಕಿದೆ ಎಂದು ಪಾಟೀಲ್ ಹೇಳಿದರು.

ಮನೆಗೆ ಬರುವ ಸೊಸೆಯನ್ನು ಮಗಳಂತೆ ಕಾಣುವ ಉದಾತ್ತ ಮನಸ್ಸು ಬೆಳೆಸಿಕೊಂಡಾಗ ಶರಣರ ವಚನಗಳೆಲ್ಲ ವನ್ನೂ ಪಾಲಿಸಿದಂತಾಗುತ್ತದೆ ಎಂದವರು ಕಿವಿಮಾತು ಹೇಳಿದರು.

ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ನೀಡಿದ ಸಂದೇಶವನ್ನು ಕೊಟ್ಟೂರು ಭಾಗದಲ್ಲಿ ಸ್ವಾಮೀಜಿಗಳು ಶತಮಾನದಿಂದ ಶತಮಾನಕ್ಕೆ ಕಾಯ್ದುಕೊಳ್ಳುತ್ತಾ ಬಂದಿದ್ದಾರೆ ಎಂದರು.

ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಕಾರಣದಿಂದ ನಾವು ಈಗ ಪಡೆಯುತ್ತಿರುವ ಸೌಲಭ್ಯಗಳನ್ನು ಕಾಣಲು ಸಾಧ್ಯವಾಗಿದೆ. ರಾಜ್ಯದ ಸಾವಿರಾರು ವಿರಕ್ತ ಮಠಗಳು ನಮ್ಮೆಲ್ಲರಿಗೆ ಶಿಕ್ಷಣ ಸಿಗಲು ಕಾರಣವಾಗಿವೆ ಎಂದರು.

ಆದರೆ, ಲಿಂಗಾಯತರು ಶರಣರ ಶ್ರೇಷ್ಠ ಪರಂಪರೆಯಲ್ಲಿ ತಿಳಿಸಿರುವಂತೆ ನಿರಾಕಾರ ದೇವರೊಬ್ಬನೇ ಎಂಬುದನ್ನು ಮರೆತು ಹಲವಾರು ದೇವರುಗಳ ಪೂಜೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ಟಿ.ವಿ.ಗಳಲ್ಲಿ ಜ್ಯೋತಿಷ್ಯದ ಮೂಲಕ ಮೌಢ್ಯ ಬೆಳೆಸಲಾಗುತ್ತಿದೆ. ಗಳಿಸಿದ ಹಣವನ್ನು ದೇವರುಗಳಿಗೆ ಖರ್ಚು ಮಾಡುವುದು ಹೆಚ್ಚಾಗುತ್ತಿದೆ. ಮೌಢ್ಯ ಬಿತ್ತುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮೌಢ್ಯನಿಷೇಧ ಕಾಯ್ದೆ ಜಾರಿಗೆ ತರುವ ಅಗತ್ಯವಿದೆ ಎಂದವರು ಹೇಳಿದರು.

ದಾವಣಗೆರೆ ವಿ.ವಿ. ಕುಲಪತಿ ಬಿ.ಡಿ. ಕುಂಬಾರ್ ಮಾತನಾಡಿ, ಕೃಷಿ ಹಾಗೂ ಕೈಗಾರಿಕಾ ಕ್ರಾಂತಿಗಳ ನಂತರ ಈಗ ಜ್ಞಾನದ ಕ್ರಾಂತಿಯಾಗಿದೆ. ಜ್ಞಾನ ಹೊಂದಿದವರು ಈಗ ಸಮಾಜದಲ್ಲಿ ಪ್ರಗತಿ ಕಾಣುತ್ತಿದ್ದಾರೆ ಎಂದರು.

ಅಮೆರಿಕದಲ್ಲಿ ಸಂಶೋಧನೆಗೆ ಬಜೆಟ್‌ನ ಶೇ.6ರಷ್ಟು ಹಣ ಕೊಡಲಾಗುತ್ತಿದೆ. ನಮ್ಮಲ್ಲಿ ಸಂಶೋಧನೆಗೆ ನೀಡುವ ಹಣ ಬಜೆಟ್‌ನ ಶೇ.0.6 ಮಾತ್ರವಿದೆ. ಸಂಶೋಧನೆ ಹಾಗೂ ಆವಿಷ್ಕಾರಗಳಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದರು.

ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಲೋಕಸಭಾ ಸದಸ್ಯ ದೇವೇಂದ್ರಪ್ಪ, ಹಗರಿಬೊಮ್ಮನಳ್ಳಿ ಶಾಸಕ ಎಲ್.ಬಿ.ಪಿ. ಭೀಮಾನಾಯ್ಕ್, ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ, ಎಸ್.ಎಸ್.ಐ.ಎಂ.ಎಸ್. ಪ್ರಾಚಾರ್ಯ ಡಾ.ಬಿ.ಎಸ್. ಪ್ರಸಾದ್, ಸಾಲುಮರದ ತಿಮ್ಮಕ್ಕ ಮತ್ತಿತರರು ಉಪಸ್ಥಿತರಿದ್ದರು.

error: Content is protected !!