ದಾವಣಗೆರೆ, ಆ.30- ಈ ಮಣ್ಣಿನಲ್ಲಿ ಹುಟ್ಟಿದ ಮೇಲೆ ನಾವೆಲ್ಲಾ ಭಾರತೀಯರು. ದೇಶಕ್ಕಾಗಿ ನಾವು ಭಕ್ತಿ ಮೂಲಕ ದೇಶಪ್ರೇಮಿಗಳಾದರೆ ಸಾಕು ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗರಾಜ್ ಲೋಕಿಕೆರೆ ಹೇಳಿದರು.
ವಿದ್ಯಾನಗರದ ಗಾಂಧಿ ಪುತ್ಥಳಿ ಬಳಿಯ ವೃತ್ತದಲ್ಲಿ ನಾಗರಾಜ್ ಲೋಕಿಕೆರೆ ಅಭಿಮಾನಿ ಬಳಗದಿಂದ ನಡೆದ 74 ನೇ ಸ್ವಾತಂತ್ರ್ಯೋತ್ಸವ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದ ಮೂಲಕ ಹಲವರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಮಹಾತ್ಮ ಗಾಂಧೀಜಿಯವರು ಶಾಂತಿ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಮೂಲಕ ವಿಶ್ವಕ್ಕೆ ಶಾಂತಿ ಪ್ರಿಯರಾಗಿ ದ್ದಾರೆ. ಇಂತಹ ಮಹಾನ್ ವ್ಯಕ್ತಿಗಳನ್ನು ನಾವು ಸ್ಮರಿಸುವ ಜೊತೆಗೆ ಅವರ ಆದರ್ಶ ಮತ್ತು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲಾ ಸಮಯದಾಯಗಳು ದೇಶದಲ್ಲಿ ಪ್ರೀತಿ, ವಿಶ್ವಾಸ, ಸಹೋದರತೆಯಿಂದ ಬದುಕುತ್ತಿದ್ದೇವೆ, ಇದೇ ನಮ್ಮ ಸೌಭಾಗ್ಯ. ವಿವಿಧತೆಯಲ್ಲಿ ಏಕತೆ ಭಾರತದ ಸಂಸ್ಕೃತಿ ಎಂಬಂತೆ ನಮ್ಮ ದೇಶ ವೈವಿದ್ಯತೆಯ ನಾಡು ಎಂದು ನಾಗರಾಜ್ ಅವರು ಹೇಳಿದರು.
ಇದೇ ವೇಳೆ ಮಾತನಾಡಿದ ಶೋಷಿತ ವರ್ಗಗಳ ಮುಖಂಡ ಬಾಡಾದ ಆನಂದರಾಜು, ಸ್ವಾತಂತ್ರ್ಯೋತ್ಸವ ದಿನ ಆಚರಣೆ ಕೇವಲ ಕಾರ್ಯಕ್ರಮ ಆಗಬಾರದು, ದೇಶ ಪ್ರೇಮದ ಸಂಕೇತವಾಗಬೇಕು ಎಂದರು. ನಾವೆಲ್ಲರೂ ಭಾರತೀಯರು ಒಂದೇ ಎಂಬ ಭಾವನೆಯಿಂದ ಬದುಕಲು ಸ್ವಾತಂತ್ರ್ಯ ದಿನಾಚರಣೆ ಮಾಡಿ ದೇಶ ಪ್ರೇಮ ಮೆರೆಯುತ್ತಿರುವುದೇ ಸಾಕ್ಷಿ ಎಂದು ಬಾಡಾದ ಆನಂದರಾಜು ತಿಳಿಸಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ನಾಗರಾಜ್, ಅಣ್ಣಪ್ಪ, ಸ್ವಾಮಿ, ಅಂಗವಿಕಲರ ಸಂಘದ ಅಧ್ಯಕ್ಷ ಧನುಂಜಯ್, ಮಹದೇವಮ್ಮ, ಸುನೀತ, ರಾಜಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.