ರಾಣೇಬೆನ್ನೂರಿನಲ್ಲಿ ಶಾಸಕ ಅರುಣ ಕುಮಾರ ಪೂಜಾರ
ರಾಣೇಬೆನ್ನೂರು, ಆ.27- ರಾಜ್ಯದಲ್ಲಿರುವ ಕೋವಿಡ್ ಮಹಾಮಾರಿ ಹಾಗೂ ಅತಿವೃಷ್ಟಿಯ ಮಹಾಪೂರದ ಸಂಕಷ್ಟದ ಸಮಯದಲ್ಲೂ ಸಹ ಸರ್ಕಾರ ಜನಕಲ್ಯಾಣ ಕಾರ್ಯಕ್ರಮಗಳನ್ನು ಅಲಕ್ಷಿಸಿಲ್ಲ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ನಗರದ ಖತೀಬ್ ಗಲ್ಲಿಯ ಉರ್ದು ಸರ್ಕಾರಿ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯ ಮೂರು ನೂತನ ಕೊಠಡಿಗಳ ನಿರ್ಮಾಣದ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಹುಲಿಕಟ್ಟಿಯಲ್ಲಿ ಸರ್ಕಾರಿ ಪ್ರೌಢಶಾಲೆಯ ಎರಡು, ಪ್ರಾಥಮಿಕ ಶಾಲೆಯ ಮೂರು, ಹಿರೇಬಿದರಿಯಲ್ಲಿ ಎರಡು, ಕೋಣನ ತಂಬಿಗೆಯಲ್ಲಿ ಒಂದು, ಅರೇಮಲ್ಲಾಪುರದಲ್ಲಿ ನಾಲ್ಕು, ಅಂಕಸಾಪುರದಲ್ಲಿ ಒಂದು, ಮೆಡ್ಲೇರಿಯಲ್ಲಿ ಐದು ಚೌಡಯ್ಯದಾನಾಪುರದಲ್ಲಿ ಎರಡು ಕೊಠಡಿಗಳ ಜೊತೆಗೆ ನಾಡಕಚೇರಿಯ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು.
ಹರನಗಿರಿ, ಚಿಕ್ಕಕುರುವತ್ತಿ, ವೈ.ಟಿ.ಯಲ್ಲಾಪುರದಲ್ಲಿ ಅಂಬೇಡ್ಕರ್ ಭವನಗಳಿಗೆ ಚೌಡಯ್ಯದಾನಾಪುರದಲ್ಲಿ ಶಾಲಾ ಕೊಠಡಿ ಮತ್ತು ಪ್ರವಾಸೋದ್ಯಮ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಶಾಸಕರ ಜೊತೆಗೆ ಜಿ.ಪಂ ಸದಸ್ಯೆ ಮಂಗಳಗೌರಿ ಪೂಜಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭೆ ಸದಸ್ಯರುಗಳಾದ ನೂರುಲ್ಲಾ ಖಾಜಿ, ರಾಜು ಅಡ್ಮನಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.