ದಾವಣಗೆರೆ, ಆ. 13 – ನಗರದಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್.ಟಿ.ಪಿ.ಐ) ಉಪಕೇಂದ್ರವನ್ನು ತೆರೆಯಲು ಈಗಾಗಲೆ ಅಗತ್ಯ ಕಟ್ಟಡವನ್ನು ಒದಗಿಸಲಾಗಿದ್ದು, ತ್ವರಿತವಾಗಿ ಕಾರ್ಯಾರಂಭಕ್ಕೆ ಅಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಸಂಸದ ಜಿ.ಎಂ. ಸಿದ್ದೇಶ್ವರ ಸೂಚನೆ ನೀಡಿದ್ದಾರೆ.
ಎಸ್‍ಟಿಪಿಐ ಕೇಂದ್ರ ಕುರಿತು ಕರೆಯಲಾಗಿದ್ದ ವರ್ಚುಯಲ್ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ ಸಂಸದ ಸಿದ್ದೇಶ್ವರ, ರಾಜ್ಯದಲ್ಲಿ ದಾವಣಗೆರೆ ಜಿಲ್ಲೆಯ ಅತ್ಯಂತ ಪ್ರಮುಖ ಸ್ಥಳದಲ್ಲಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಐಟಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅನುಕೂಲ ಸಿಗಲು ಎಸ್.ಟಿ.ಪಿ.ಐ.ನ ಕೇಂದ್ರ ಸ್ಥಾಪನೆಯಾಗಬೇಕಿದೆ ಎಂದರು.
ಈ ಸಭೆಯಲ್ಲಿ ಎಸ್.ಟಿ.ಪಿ.ಐ. ನಿರ್ದೇಶಕ ಶೈಲೇಂದ್ರಕುಮಾರ ತ್ಯಾಗಿ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ:ವಿದ್ಯಾ ಶಂಕರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭಾಗವಹಿಸಿದ್ದರು.
ಈ ಘಟಕಕ್ಕಾಗಿ ಸರ್ಕಾರದಿಂದ ಎಸ್.ಟಿ.ಪಿ.ಐ.ಗೆ ಉಚಿತವಾಗಿ ತುರ್ಚಘಟ್ಟದ ಬಳಿ ಎರಡು ಎಕರೆ ಸರ್ಕಾರಿ ಜಮೀನು ಮತ್ತು ನಗರದ ಜೆ.ಹೆಚ್.ಬಡಾವಣೆಯಲ್ಲಿರುವ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಸೇರಿದ ದಾವಣಗೆರೆಯ ಪ್ರಾದೇಶಿಕ ಕೇಂದ್ರ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಸ್ಥಳಾವಕಾಶ ಒದಗಿಸಲು ನಿರ್ಧರಿಸಲಾಗಿತ್ತು. ವಿಶ್ವವಿದ್ಯಾನಿಲಯ ಮತ್ತು ಎಸ್.ಟಿ.ಪಿ.ಐ. ನಡುವೆ ಇದ್ದ ಕೆಲವೊಂದು ಗೊಂದಲಗಳನ್ನು ಪರಿಹರಿಸಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿ ಬರುವ ಎಸ್.ಟಿ.ಪಿ.ಐ.ನ ಉಪ ಕೇಂದ್ರ ದಾವಣಗೆರೆಯಲ್ಲಿ ತೆರೆಯಬೇಕೆಂಬ ಆಶಯದೊಂದಿಗೆ 2015 ರಲ್ಲಿಯೇ ನಾನು ಪ್ರಯತ್ನ ಮಾಡಿದ್ದೆ. 2016 ರ ನವೆಂಬರ್‍ನಲ್ಲಿ ನಡೆದ ಎಸ್.ಟಿ.ಪಿ.ಐ. ಗೌರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ದಾವಣಗೆರೆಯಲ್ಲಿ ಎಸ್.ಟಿ.ಪಿ.ಐ. ಕೇಂದ್ರ ತೆರೆಯಲು ಅನುಮೋದನೆ ನೀಡಲಾಗಿದೆ. ಈಗಾಗಲೆ ತಾತ್ಕಾಲಿಕವಾಗಿ ಕಟ್ಟಡವನ್ನು ಒದಗಿಸಲು ಕರ್ನಾಟಕ ಮುಕ್ತ ವಿ.ವಿ.ಯವರು ಸಮ್ಮತಿಸಿದ್ದು, ಕಟ್ಟಡ ನಿರ್ವಹಣಾ ವೆಚ್ಚ ಭರಿಸಲು ವಿಶ್ವವಿದ್ಯಾಲಯದವರೇ ಮುಂದಾಗಬೇಕು ಎಂದು ಸಂಸದ ಸಿದ್ದೇಶ್ವರ್ ಅವರು ಉಪಕುಲಪತಿಗಳಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪಕುಲಪತಿ ಡಾ. ವಿದ್ಯಾಶಂಕರ್ , ನಿರ್ವಹಣಾ ವೆಚ್ಚ ವಿವಿಯೇ ಭರಿಸುವ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಸಂಸದರು ಪತ್ರದ ಮೂಲಕ ಪ್ರಸ್ತಾವನೆ ಸಲ್ಲಿಸಿದಲ್ಲಿ, ವಿಶ್ವವಿದ್ಯಾಲಯದ ಬೋರ್ಡ್ ಸಭೆಯಲ್ಲಿ ಮಂಡಿಸಿ, ಅಗತ್ಯ ನಿರ್ಧಾರ ಕೈಗೊಳ್ಳಲಾಗುವುದು ಎಂಬುದಾಗಿ ಭರವಸೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ವಿಶ್ವವಿದ್ಯಾಲಯಕ್ಕೆ ಇಂದೇ ಪತ್ರ ಕಳುಹಿಸುವುದಾಗಿ ಹೇಳಿದರು.
ಸಂಸದ ಸಿದ್ಧೇಶ್ವರ್ ಮಾತನಾಡಿ, ಈಗಾಗಲೇ ಕೇಂದ್ರ ತೆರೆಯುವಲ್ಲಿ ಸಾಕಷ್ಟು ವಿಳಂಬವಾಗಿದೆ, ಇನ್ನು ಸಣ್ಣ ಪುಟ್ಟ ಕಾರಣಗಳಿಗಾಗಿ ವಿಳಂಬ ಮಾಡುವುದು ಬೇಡ, ಎಲ್ಲರೂ ಸಮನ್ವಯತೆ ಸಾಧಿಸಿಕೊಂಡು ಕೆಲಸ ಮಾಡಿ. ಇನ್ನೆರಡು ಮೂರು ತಿಂಗಳಲ್ಲಿ ಕೇಂದ್ರ ಕಾರ್ಯಾರಂಭ ಮಾಡಬೇಕು ಎಂದರು.
ವರ್ಚುವಲ್ ಸಭೆಯಲ್ಲಿ ಎಸ್.ಟಿ.ಪಿ.ಐ. ಸಂಚಾಲಕ ಮಹದೇಶ್, ಜಿ.ಎಂ.ಐ.ಟಿ. ಕಾಲೇಜಿನ ಪ್ರಾಧ್ಯಾಪಕ ಗಣೇಶ್, ಮಹಾನಗರ ಪಾಲಿಕೆ ಸದಸ್ಯ ಪ್ರಸನ್ನ, ಎನ್,ಐ.ಸಿ.ಯ ರಮೇಶ್, ಸಿ.ಹೆಚ್. ದೇವರಾಜ್, ಉದಯ್, ಲೋಕಿಕೆರೆ ನಾಗರಾಜ್ ಉಪಸ್ಥಿತರಿದ್ದರು.