ಹರಪನಹಳ್ಳಿ, ನ. 09-ಬರ, ನೆರೆ, ಜಿ.ಎಸ್.ಟಿ, ನೋಟ್ ಬ್ಯಾನ್, ಕೋವಿಡ್-19 ಲಾಕ್ಡೌನ್ ಕಾರಣದಿಂದಾಗಿ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಸಾಮಾನ್ಯ ಜನರಿಗೆ, ಉದ್ಯೋಗವಿಲ್ಲದೆ, ನಿಯಮಿತ ಆದಾಯವಿಲ್ಲದೆ ಪರದಾಡುತ್ತಿರುವ ಜನರಿಗೆ ಸರ್ಕಾರ ಬರೆ ಎಳೆದಂತಾಗಿದೆ. ಈ ಕೂಡಲೇ ಸರ್ಕಾರ ವಿದ್ಯುಚ್ಛಕ್ತಿ ದರ ಏರಿಸ ಕೂಡದು ಎಂದು ಪುರಸಭೆ ಸದಸ್ಯ ಎಸ್.ಜಾಕೀರ್ ಹುಸೇನ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ರಾಜ್ಯದ ವಿವಿಧ ವಿದ್ಯುತ್ ಕಂಪನಿಗಳು ಗೃಹ ಬಳಕೆಯ ಪ್ರತಿ ಯುನಿಟ್ಗೆ 25 ಪೈಸೆ, ಕುಡಿಯುವ ನೀರಿಗೆ 25 ಪೈಸೆ, ವಾಣಿಜ್ಯ ಬಳಕೆಗೆ 25 ಪೈಸೆ ಹಾಗೂ ಕೈಗಾರಿಕೆಗಳಲ್ಲಿ ಪ್ರತಿ ಯುನಿಟ್ಗೆ 30 ಪೈಸೆ ವಿದ್ಯುಚ್ಛಕ್ತಿ ದರವನ್ನು ಹೆಚ್ಚಿಗೆ ಮಾಡಿ ನವೆಂಬರ್ 2020 ರಂದು ಜಾರಿಗೆ ಬರುವಂತೆ ಆದೇಶ ನೀಡಿರುತ್ತದೆ. ವಿದ್ಯುತ್ ಕಂಪನಿಗಳು ಲಾಭದಾಯಕವಾಗಿ ನಡೆಯುವಂತಾಗಲು ಹಲವು ಮಾರ್ಗಗಳಿವೆ. ರಾಜ್ಯವು ಕಳೆದ ಕೆಲವು ವರ್ಷಗಳಿಂದ ಸೌರ, ಪವನ, ಹಾಗೂ ಜಲ ಮೂಲದಿಂದ ಸಾಕಷ್ಟು ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಆದರೂ ಕೇಂದ್ರ ಸರ್ಕಾರದಿಂದ ಮತ್ತು ಖಾಸಗಿ ಕಂಪನಿಗಳಿಂದ ರಾಜ್ಯ ಸರ್ಕಾರ ವಿದ್ಯುತ್ತನ್ನು ಹೆಚ್ಚಿನ ದರಕ್ಕೆ ಖರೀದಿ ಮಾಡುತ್ತಿರುವ ಮರ್ಮವಾದರೂ ಏನು? ರಾಜ್ಯದ ಜನರ ಮೇಲೆ ಆರ್ಥಿಕ ಹೊರೆ ಹೇರುವುದು ಅಕ್ಷಮ್ಯ ಅಪರಾಧ ಮತ್ತು ಇದು ಜನಪರ ಸರ್ಕಾರ ಮಾಡುವ ಕೆಲಸವಲ್ಲ. ಕಾರಣ ವಿದ್ಯುತ್ ದರ ಹೆಚ್ಚಿಗೆ ಮಾಡಿ ನವೆಂಬರ್ 2020 ರಿಂದ ಜಾರಿಗೆ ತರಲು ಮಾಡಿರುವ ಆದೇಶವನ್ನು ಸರ್ಕಾರ ತಕ್ಷಣವೇ ವಾಪಾಸ್ ಪಡೆಯಬೇಕು ಎಂದರು.