ಹರಪನಹಳ್ಳಿಯನ್ನು ಜಿಲ್ಲೆಯನ್ನಾಗಿ ಘೋಷಿಸಲು ಒತ್ತಾಯ

ಅಸ್ವಸ್ಥಗೊಂಡ ಹೋರಾಟಗಾರ ಮೌಲ್ವಿ ಖಾಜಿ ಮುಸ್ತಾಕ್ ಅಹ್ಮದ್ ರಜ್ವಿ ಆಸ್ಪತ್ರೆಗೆ ದಾಖಲು

ಜಿಲ್ಲಾ ಹೋರಾಟ ಸಮಿತಿಯಿಂದ ಉಪವಾಸ ಸತ್ಯಾಗ್ರಹ  

ಹರಪನಹಳ್ಳಿ, ನ.22- ಹರಪನಹಳ್ಳಿ ತಾಲೂಕನ್ನು ಉದ್ದೇಶಿತ ವಿಜಯನಗರ ಜಿಲ್ಲೆಗೆ  ಸೇರಿಸುವುದನ್ನು ಬಿಟ್ಟು ಹರಪನಹಳ್ಳಿಯನ್ನೇ ನೂತನ ಜಿಲ್ಲೆಯನ್ನಾಗಿ ಘೋಷಿಸ ಬೇಕು ಎಂದು ಒತ್ತಾಯಿಸಿ ಜಿಲ್ಲಾ ಹೋರಾಟ ಸಮಿತಿಯವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ  ಆರಂಭಿಸಿದ್ದ ಹೋರಾಟಗಾರನನ್ನು  ಪೊಲೀಸರು ಆಸ್ಪತ್ರೆಗೆ ದಾಖಲಿಸಿದ ಘಟನೆ ಭಾನುವಾರ ಪಟ್ಟಣದಲ್ಲಿ ಜರುಗಿತು. 

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಜಿಲ್ಲಾ ಹೋರಾಟ ಸಮಿತಿಯ ಟೆಂಟ್‍ನಲ್ಲಿ ಹರಪನಹಳ್ಳಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ  ಶುಕ್ರವಾರ ಉಪವಾಸ ಸತ್ಯಾಗ್ರಹವನ್ನು ಮೌಲ್ವಿ ಖಾಜಿ ಮುಸ್ತಾಕ್ ಅಹ್ಮದ್ ರಜ್ವಿ ಅವರು ಆರಂಭಿಸಿದ್ದರು. ಸಮಯ ಕಳೆದಂತೆ ಸುಸ್ತಾಗುತ್ತಾ ಸಾಗಿದ್ದ ರಜ್ವಿ ಅವರನ್ನು ಉಪವಾಸ ಆರಂಭಿಸಿ 24 ಗಂಟೆ ನಂತರ ಇಲ್ಲಿಯ ಪಿಎಸ್ ಐ ಪ್ರಕಾಶ್   ನೇತೃತ್ವದಲ್ಲಿ ಪೊಲೀಸರು ಆಂಬ್ಯೂಲೆನ್ಸ್ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಗ್ಲುಕೋಸ್ ಹಾಕಿಸಿದರು. ಇದಕ್ಕೂ ಪೂರ್ವದಲ್ಲಿ ಮಾತನಾಡಿದ  ಮುಸ್ತಾಕ್  ಅಹ್ಮದ್ ಅವರು ಹರಪನಹಳ್ಳಿಯನ್ನೇ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು, ಅಲ್ಲಿಯವರೆಗೂ ಉಪವಾಸ ಕೈ ಬಿಡುವುದಿಲ್ಲ, ಒತ್ತಾಯ ಪೂರ್ವಕವಾಗಿ ಆಸ್ಪತ್ರೆಗೆ ದಾಖಲಿಸಿದರೂ ಹೋರಾಟ ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ವಕೀಲ ನಂದಿಬೇವೂರು ಜಗದಪ್ಪ ಮಾತನಾಡಿ, ತಾಲ್ಲೂಕಿನ ಕೂಲಿ ಕಾರ್ಮಿಕರು ತಮ್ಮ ಹೊಟ್ಟೆಪಾಡಿಗಾಗಿ ವಲಸೆ ಹೋಗುತ್ತಿದ್ದಾರೆ. ಹರಪನಹಳ್ಳಿ ತಾಲ್ಲೂಕಿನಲ್ಲಿ ರಾಜರು, ಪಾಳೆಗಾರರು ಕಟ್ಟಿದ ಕೋಟೆಯ ಇತಿಹಾಸವನ್ನು ಹೊಂದಿರುವ ತಾಲ್ಲೂಕನ್ನು ಬಳ್ಳಾರಿ ಜಿಲ್ಲೆಯಿಂದ ಬೇರ್ಪಡಿಸಿ ಹರಪನಹಳ್ಳಿ ತಾಲ್ಲೂಕನ್ನು ಜಿಲ್ಲೆಯನ್ನಾಗಿ ಮಾಡಬೇಕು. ರಾಜ್ಯದ ಬಿಜೆಪಿ ಸರ್ಕಾರ ಒಬ್ಬ ವ್ಯಕ್ತಿಗೆ ಮಣಿದು ವಿಜಯನಗರ ಜಿಲ್ಲೆಯನ್ನಾಗಿ ಮಾಡಲು ತಾತ್ವಿಕವಾಗಿ ಒಪ್ಪಿಗೆ ನೀಡಿರುವುದು ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆ ರಾಜ್ಯದ ಮುಖ್ಯ ಮಂತ್ರಿಗಳು ಹೀಗೆ ಮುಂದುವರೆದರೆ ಬೆಂಗಳೂರಿನ ವಿಧಾನ ಸೌಧಕ್ಕೆ ಬಂದು ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕಿನ ಪ್ರಗತಿಪರ ಸಂಘಟನೆಯ ಮುಖಂಡರುಗಳಾದ ಹೊಸಹಳ್ಳಿ ಮಲ್ಲೇಶ್, ಇದ್ಲಿ ರಾಮಪ್ಪ, ಪುರಸಭೆ ಮಾಜಿ ಅಧ್ಯಕ್ಷ ಡಿ. ಅಬ್ದುಲ್ ರೆಹಮಾನ್,  ಹೆಚ್.ಎಂ. ಸಂತೋಷ್, ರಮೇಶ್ ನಾಯ್ಕ, ಚಂದ್ರನಾಯ್ಕ, ಗುಡಿಹಳ್ಳಿ ಹಾಲೇಶ್, ದೊಡ್ಡಮನಿ ಪ್ರಸಾದ್, ಬೆಂಡಿಗೇರೆ ಗುರುಸಿದ್ದಪ್ಪ,  ಮಾಬುಸಾಬ್, ಚಿದಾನಂದಯ್ಯ ಸ್ವಾಮಿ, ಮಲ್ಲೇಶ್, ಭಾಗ್ಯ, ಶೃತಿ ಮತ್ತಿತರರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

error: Content is protected !!