ದಾವಣಗೆರೆ, ನ.9- ಜಿಲ್ಲೆಯ ನೀರಾವರಿ ಇಲಾಖೆಗಳ ಸಮಸ್ಯೆಗಳನ್ನು ಪ್ರಥಮಾದ್ಯತೆ ಮೇಲೆ ಪರಿಹರಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೇರಿದಂತೆ ರೈತ ಪರ ಸಂಘಟನೆಗಳ ಜಿಲ್ಲಾ ಮುಖಂಡರ ನಿಯೋಗವು ಶಿವಮೊಗ್ಗದ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರನ್ನು ಒತ್ತಾಯಿಸಿದೆ.
ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ, ಜಿಲ್ಲೆಯ ಸೂಳೆ ಕೆರೆ, ದೇವರಬೆಳಕೆರೆ ಹಾಗೂ ಇನ್ನಿತರೆ ಕೆರೆಗಳು ಒತ್ತುವರಿಯಾಗಿದ್ದು, ಸರ್ಕಾರದ ಆದೇಶವಾಗಿ ದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಈ ಬಗ್ಗೆ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನೀರಾವರಿ ಇಲಾಖೆಯ ರಸ್ತೆಗಳು ಹಾಳಾಗಿದ್ದು, ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಕೊಮಾರನಹಳ್ಳಿ ಕಾಲುವೆಯಿಂದ ಜಿಟಿ ಕಟ್ಟೆಯವರೆಗೆ ಹಾಗೂ ಇನ್ನಿತರೆ ರಸ್ತೆಗಳ ಕಾಮಗಾರಿಯನ್ನು ಕ್ರಮಬದ್ಧವಾಗಿ ಮಾಡಲು ಕ್ರಮ ಕೈಗೊಳ್ಳಬೇಕು. ನೀರಾವರಿ ಇಲಾಖೆಯ ಭೂ ಸ್ವಾಧೀನ ಪ್ರಕರಣಗಳಿಗೆ 1992ರಿಂದ ಭೂ ಬೆಳೆ ನಷ್ಟ ಪರಿಹಾರವನ್ನು ಇನ್ನೂ ಸಹ ನೀಡಿಲ್ಲ. ತಕ್ಷಣ ಪರಿಹಾರದ ಹಣವನ್ನು ಬಿಡು ಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕೆರೆಗಳ ಅಕ್ರಮ ಸ್ವಾಧೀನ ತೆರವುಗೊಳಿಸಿ ಹರಿಹರ ತಾಲ್ಲೂಕು ಮಲೇಬೆನ್ನೂರು ಹೋಬಳಿಯ ಮುದ್ದಪ್ಪನ ಕೆರೆಯ ಹೂಳು ಮಣ್ಣನ್ನು ತೆಗೆಸಬೇಕು. 15 ದಿನಗಳ ಒಳಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಬಡಗಲಪುರ ನಾಗೇಂದ್ರ, ರವಿಕಿರಣ್ ಸೇರಿದಂತೆ ಇತರರು ಇದ್ದರು.