ಹರಿಹರ ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮೀ ಎತ್ತಂಗಡಿಗೆ ಯತ್ನ

ಹರಿಹರ ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮೀ ಎತ್ತಂಗಡಿಗೆ ಯತ್ನ - Janathavaniಹರಿಹರ, ನ. 9- ಇಲ್ಲಿನ ನಗರಸಭೆ ಪೌರಾಯುಕ್ತರಾದ ಶ್ರೀಮತಿ ಎಸ್.ಲಕ್ಷ್ಮೀ ಅವರನ್ನು ವರ್ಗಾವಣೆ ಮಾಡಬೇಕೆಂದು ಕೆಲವರು ಟೊಂಕ ಕಟ್ಟಿ ನಿಂತು ಯಶಸ್ಸು ಪಡೆಯುವ ಹಂತದಲ್ಲಿದ್ದಾರೆ ಎನ್ನಲಾಗಿದೆ. 

ಪೌರಾಯುಕ್ತರ ಪರ ಇರುವ ಮತ್ತೊಂದು ಗುಂಪು ಅವರನ್ನು ಹರಿಹರದಲ್ಲಿಯೇ ಉಳಿಸಿಕೊಳ್ಳಲು ಶತಾಯಗತಾಯ ಶ್ರಮಿಸುತ್ತಿದೆ. ಒಂದು ವೇಳೆ ವರ್ಗಾವಣೆಯಾದರೆ ಹೋರಾಟವನ್ನೂ ನಡೆಸಲು ಮುಂದಾಗಿರುವ ಬಗ್ಗೆ ಮೂಲಗಳು ತಿಳಿಸಿವೆ.

ಲಕ್ಷ್ಮೀ ಅವರು ಮಾಡಿರುವ ಜನಪರ ಕಾರ್ಯಗಳನ್ನು ಮೆಚ್ಚಿರುವ ಕೆಲವು ಸದಸ್ಯರು, ಕನ್ನಡ ಪರ ಸಂಘಟನೆ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ವರ್ಗಾವಣೆ ತಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಲೇ ಇದ್ದಾರೆ.

ಹಲವು ವರ್ಷಗಳಿಂದ ಪೌರಾಯುಕ್ತೆಯಾಗಿದ್ದ ಲಕ್ಷ್ಮೀ, ಅಧಿಕಾರ ಸ್ವೀಕರಿಸಿದಾಗಿನಿಂದ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಜಲಸಿರಿ ಯೋಜನೆ, ರಸ್ತೆ ಅಗಲೀಕರಣ, ಚರಂಡಿ, ವಿದ್ಯುತ್, ಯುಜಿಡಿ, ಕೊರೊನಾ ನಿಯಂತ್ರಣ ಹೀಗೆ ಅನೇಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರು ಇಲ್ಲಿಯೇ ಇರಲಿ ಎಂಬ ಕೂಗಿನೊಂದಿಗೆ  ಒಂದು ಗುಂಪು ಅವರ ಪರ ನಿಂತಿದೆ.

ಏತನ್ಮಧ್ಯೆ ಪತ್ರಿಕೆಯೊಂದಿಗೆ ಮಾತನಾಡಿದ ಲಕ್ಷ್ಮೀ, ನಾನು ಇಲ್ಲಿಗೆ ಬಂದು  ನಾಲ್ಕು ವರ್ಷಗಳು ಕಳೆದಿವೆ. ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಸಾಮಾನ್ಯ. ಕೆಲ ವ್ಯಕ್ತಿಗಳು ನನ್ನನ್ನು ಬೇರೆ ಕಡೆ ವರ್ಗಾವಣೆ ಮಾಡಿಸಲು ಮುಂದಾಗಿರುವುದೂ ನಿಜ. ಆದರೆ ಕೆಲ ಸದಸ್ಯರು, ಸಾರ್ವಜನಿಕರು ನನ್ನ ಬೆಂಬಲಕ್ಕೆ ನಿಂತಿದ್ದು ಸಂತೋಷ ತಂದಿದೆ. ಇಷ್ಟು ವರ್ಷಗಳ ಸೇವೆ ಸಾರ್ಥಕವೆನಿಸಿದೆ ಎಂದರು.

ಈ ಹಿಂದೆ ನಗರಸಭೆ ಅಧ್ಯಕ್ಷ ಸ್ಥಾನ ಎಸ್.ಸಿ. ಗೆ ಮೀಸಲಾಗಿತ್ತು. ನಂತರ ಸಾಮಾನ್ಯ ಮಹಿಳೆಗೆ ಮೀಸಲು ನಿರ್ಧಾರವಾಯಿತು.  ಆರಂಭದಲ್ಲಿ ಮೀಸಲಾತಿ ನಿರೀಕ್ಷೆಯಲ್ಲಿದ್ದ ಕೆಲವರಲ್ಲಿ ಅಸಮಾಧಾನ ಇದ್ದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

error: Content is protected !!