ಹರಪನಹಳ್ಳಿ, ನ.24- ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ತಾಲ್ಲೂಕಿನಲ್ಲಿ 93 ಮನೆಗಳು ಭಾಗಶಃ ಜಖಂಗೊಂಡಿದ್ದು, ಕೃಷಿ ಹಾಗೂ ತೋಟಗಾರಿಕೆ ಸೇರಿ ಒಟ್ಟು 1701 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ.
ಈ ಕುರಿತು ಶಾಸಕ ಜಿ.ಕರುಣಾಕರ ರೆಡ್ಡಿ ಅವರು ಬುಧವಾರ ತಾಲ್ಲೂಕಿನ ನದಿ ತೀರದ ಗ್ರಾಮಗಳಲ್ಲಿ ಬೆಳೆ ಹಾನಿ ವೀಕ್ಷಿಸಿದ ನಂತರ ಹಲು ವಾಗಲಿನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಮೆಕ್ಕೇಜೋಳ 264 ಹೆ., ರಾಗಿ 89 ಹೆ., ಭತ್ತ 179 ಹೆ. ಸೇರಿ ಒಟ್ಟು 532 ಹೆಕ್ಟೇರ್ ಹಾಗೂ ತೋಟಗಾರಿಕೆ ಬೆಳೆ 1169 ಹೆ. ಸೇರಿ ಒಟ್ಟು 1,701 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು.
ತಾವರಗೊಂದಿ ಗ್ರಾಮದಲ್ಲಿ 83 ಫಲಾನುಭವಿಗಳ 3447 ಭತ್ತದ ಚೀಲಗಳು ನದಿಯಲ್ಲಿ ತೇಲಿ ಹೋಗಿವೆ. ಈ ತಿಂಗಳ ಅಂತ್ಯಕ್ಕೆ ಸಂಪೂರ್ಣ ಹಾನಿ ಮಾಹಿತಿ ಸಿಗಲಿದೆ. ಈವರೆಗೂ ದೊರೆತ ಹಾನಿ ವರದಿಯನ್ನು ಜಿಲ್ಲಾಧಿಕಾರಿ ಗಳ ಮೂಲಕ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ನದಿ ಭಾಗದ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಗ್ರಾ.ಪಂ ವ್ಯಾಪ್ತಿಯಲ್ಲಿ ಬಡವರಿಗೆ ಮನೆ ಹಂಚಿಕೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಈ ಕುರಿತು ಕಾಂಗ್ರೆಸ್ ಮುಖಂಡ ಡಾ.ಉಮೇಶ್ ಬಾಬು ಅವರ ಆರೋಪದಲ್ಲಿ ಹುರುಳಿಲ್ಲ ಎಂದರು.
ತಹಶೀಲ್ದಾರ್ ಎಲ್.ಎಂ.ನಂದೀಶ್, ಸಹಾಯಕ ಕೃಷಿ ನಿರ್ದೆಶಕ ಮಂಜುನಾಥ ಗೊಂದಿ, ಎಇಇ ಸತೀಶ್ ಪಾಟೀಲ್, ತೋಟಗಾರಿಕೆ ಸಹಾಯಕ ನಿರ್ದೆಶಕ ಜಯಸಿಂಹ, ತಾಲ್ಲೂಕು ಬಿಜೆಪಿ ಘಟಕದ ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ಜಿಲ್ಲಾ ಬಿಜೆಪಿ ಎಸ್.ಟಿ ಘಟಕದ ಕಾರ್ಯದರ್ಶಿ ಆರ್ .ಲೋಕೇಶ್, ಮುಖಂಡರಾದ ಎಂ.ಪಿ.ನಾಯ್ಕ, ಡಾ.ಎಂ.ಬಿ.ಅಧಿಕಾರ್, ಈಡಿಗರ ಅಂಜಿನಪ್ಪ, ರಾಘವೇಂದ್ರ ಶೆಟ್ಟಿ, ಯು.ಪಿ.ನಾಗರಾಜ, ಎಚ್ .ಟಿ.ಗಿರೀಶಪ್ಪ, ಮಲ್ಲೇಶ, ಕಲ್ಲೇರ ಬಸವರಾಜ, ಮೆಡಿಕಲ್ ತಿಮ್ಮಣ್ಣ ಸೇರಿದಂತೆ ಇತರರು ಇದ್ದರು.