ಮಕ್ಕಳ ಅಪೌಷ್ಟಿಕತೆ ಚಿಕಿತ್ಸೆಗೆ ಅರಿವಿನ ಕೊರತೆ

ದಾವಣಗೆರೆ, ನ. 24 – ಮಕ್ಕಳಲ್ಲಿನ ಅಪೌಷ್ಟಿಕತೆ ಗಂಭೀರ ಸಮಸ್ಯೆಯಾದರೂ ಸಹ, ಕೊರೊನಾ ಸಂದರ್ಭ ಹಾಗೂ ಪೋಷಕರಲ್ಲಿ ಅರಿವಿನ ಕೊರತೆಯಿಂದಾಗಿ ಸಾಕಷ್ಟು ಮಕ್ಕಳು ಸೂಕ್ತ ಸಮಯದಲ್ಲಿ ಅಪೌಷ್ಟಿ ಕತೆಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗಿ ಲ್ಲ ಎಂಬುದು ನಗರದಲ್ಲಿರುವ ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರದ ಮಾಹಿತಿ ತಿಳಿಸುತ್ತಿದೆ.

ಕಳೆದ ವರ್ಷ 2020ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಜಿಲ್ಲಾ ಚಿಗಟೇರಿ ಆಸ್ಪತ್ರೆ ಯಲ್ಲಿರುವ ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರವನ್ನು ಮುಚ್ಚಲಾಗಿತ್ತು. ನಂತರದಲ್ಲೂ ಮಕ್ಕಳು ದಾಖಲಾಗುವ ಪ್ರಮಾಣ ಕಡಿಮೆ ಇದೆ. ಪ್ರಸಕ್ತ ಹತ್ತು ಬೆಡ್‌ಗಳಿದ್ದರೆ, ಆರು ಮಕ್ಕಳು ಮಾತ್ರ ದಾಖಲಾಗಿದ್ದಾರೆ.

2018-19ರಲ್ಲಿ ಈ ಕೇಂದ್ರದಲ್ಲಿ 153 ಮಕ್ಕಳು ಚಿಕಿತ್ಸೆ ಪಡೆದಿದ್ದಾರೆ. 2020-21ರಲ್ಲಿ ಕೊರೊನಾ ಕಾರಣದಿಂದ ಈ ಸಂಖ್ಯೆ 53ಕ್ಕೆ ಕುಸಿದಿತ್ತು. 2021-22ರಲ್ಲಿ ಇದುವರೆಗೂ 70 ಮಕ್ಕಳು ಚಿಕಿತ್ಸೆ ಪಡೆದಿದ್ದಾರೆ.

ಚಿಕಿತ್ಸೆಗೆ ನಿರಾಸಕ್ತಿ : ಅಪೌಷ್ಟಿಕ ಮಕ್ಕಳಿಗೆ ಉಚಿತ ಊಟ – ಚಿಕಿತ್ಸೆ ನೀಡಲಾಗುತ್ತದೆ. ಮಕ್ಕಳ ಜೊತೆ ಇರುವ ತಾಯಿಗೂ ಉಚಿತ ಊಟದ ಜೊತೆಗೆ ಕೂಲಿ ಪರಿಹಾರವಾಗಿ ದಿನಕ್ಕೆ 275 ರೂ. ನೀಡಲಾಗುತ್ತದೆ. ಇಷ್ಟಾದರೂ, ಹಲವಾರು ಮಕ್ಕಳಿಗೆ ಚಿಕಿತ್ಸೆ ನೀಡಲು ನಿರಾಸಕ್ತಿ ತೋರುತ್ತಿದ್ದಾರೆ.

ಚಿಕಿತ್ಸಾ ಅವಧಿಯಲ್ಲಿ ಅರ್ಧದಲ್ಲೇ ಕರೆದುಕೊಂಡು ಹೋದ ಉದಾಹರಣೆಗಳಿವೆ. ಚಿಕಿತ್ಸೆಗೆ ಅಗತ್ಯವಿರುವ ಮಕ್ಕಳ ಪೈಕಿ ಶೇ.25ರಷ್ಟು ಮಾತ್ರ ಸದ್ಯಕ್ಕೆ ಕೇಂದ್ರಕ್ಕೆ ಬರುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ರೋಗದಿಂದಲೂ ಅಪೌಷ್ಟಿಕತೆ : ಪ್ರೊಟೀನ್‌ ಕೊರತೆಯಿಂದಾಗಿ ಅಪೌಷ್ಟಿಕತೆ ಸಮಸ್ಯೆ ಎದುರಿಸುವ ಮಕ್ಕಳ ಸಂಖ್ಯೆ ಹೆಚ್ಚು. ಅನುವಂಶಿಕ ಸಮಸ್ಯೆ ಹಾಗೂ ಕಾಯಿಲೆಗಳಿಂದಲೂ ಮಕ್ಕಳು ಅಪೌಷ್ಟಿಕತೆಗೆ ಗುರಿಯಾಗುತ್ತಾರೆ. ನ್ಯೂಮೋನಿಯ, ಕ್ಷಯ ಹಾಗೂ ಹೃದಯ ಸಮಸ್ಯೆಗಳಿಂದಲೂ ಅಪೌಷ್ಟಿಕತೆ ಹೆಚ್ಚಾಗುತ್ತದೆ ಎಂದು ಕೇಂದ್ರದ ನೋಡಲ್ ಅಧಿಕಾರಿಯಾಗಿರುವ ಡಾ. ಎಂ.ಎನ್. ಲೋಹಿತ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ಪುನರ್ವಸತಿ ಕೇಂದ್ರಕ್ಕೆ ದಾಖಲಾದ ಮಕ್ಕಳು 14 ದಿನಗಳಲ್ಲೇ ಶೇ.90ರಷ್ಟು ಮಕ್ಕಳು ಶೇ.15ರವರೆಗೆ ತೂಕ ಹೆಚ್ಚಿಸಿಕೊಂಡು ಬಿಡುಗಡೆಯಾಗುತ್ತಾರೆ. ಮಕ್ಕಳ ಅಪೌಷ್ಟಿಕತೆಗೆ ಬೇರೆ ಬೇರೆ ರೋಗಗಳೂ ಕಾರಣವಾಗಿದ್ದರೆ, ಅದಕ್ಕೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

ಅಪೌಷ್ಟಿಕ ಮಕ್ಕಳನ್ನು ಗುರುತಿಸುವಲ್ಲಿ ಅಂಗನವಾಡಿಗಳು ಪ್ರಮುಖ ಪಾತ್ರ ವಹಿಸಿವೆ. ಅಲ್ಲಿಂದಲೇ ಹೆಚ್ಚು ಮಕ್ಕಳನ್ನು ಗುರುತಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಅಂಗನವಾಡಿಗಳಲ್ಲಿ ಅಪೌಷ್ಟಿಕ ಮಕ್ಕಳನ್ನು ಗುರುತಿಸುವ ಜೊತೆಗೆ ಅವರಿಗೆ ಸ್ಪಿರುಲಿನಾ ಚಿಕ್ಕಿ, ಬೂಸ್ಟರ್‌ ಸೇರಿದಂತೆ ಅಗತ್ಯ ಆಹಾರ ಒದಗಿಸಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆಯಲ್ಲಿ ಸಾಕಷ್ಟು ಇಳಿಕೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಹೆಚ್. ವಿಜಯಕುಮಾರ್ ತಿಳಿಸಿದ್ದಾರೆ.

error: Content is protected !!