ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ
ಹರಪನಹಳ್ಳಿ, ನ. 22- ನೂರಾರು ಎಕರೆಯಲ್ಲಿ ಬೆಳೆದ ಸಾವಿರಾರು ಭತ್ತದ ಚೀಲಗಳು ನದಿ ಪಾಲಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಈ ಭಾಗದ ಶಾಸಕರು, ಸಂಸದರು ಕೂಡಲೇ ಪರಿಹಾರ ಕೊಡಿಸಲು ಮುಂದಾಗಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಒತ್ತಾಯಿಸಿದರು.
ತುಂಗಭದ್ರಾ ನದಿ ಹತ್ತಿರದ ತಾಲ್ಲೂಕಿನ ಗಡಿಭಾಗದಲ್ಲಿರುವ ತಾವರಗುಂದಿ ಗ್ರಾಮದ ರೈತರು ಭತ್ತದ ಫಸಲು ಹಾನಿಯಾಗಿರುವುದನ್ನು ಕಂಡು ಗ್ರಾಮಕ್ಕೆ ಭೇಟಿ ನೀಡಿ, ರೈತರಿಗೆ ಸಾಂತ್ವನ ಮತ್ತು ಆತ್ಮಸ್ಥೈರ್ಯ ನೀಡಿ, ಹರಿಹರ ಪೀಠ ನಿಮ್ಮ ಜೊತೆಗಿದೆ. ಯಾರೂ ಧೈರ್ಯ ಕಳೆದುಕೊಳ್ಳಬೇಡಿ ಎಂದರು.
ಈಗಾಗಲೇ ನಾವು ಕೂಡ ಜಿಲ್ಲಾಧಿಕಾರಿಗಳ ಜತೆ ಪರಿಹಾರ ನೀಡುವ ಕುರಿತು ಮಾತನಾಡಿರುವುದಾಗಿ ಹೇಳಿದ ಅವರು, ಕೋವಿಡ್ ಪರಿಸ್ಥಿತಿ ಒಂದೆಡೆಯಾದರೆ, ಅಕಾಲಿಕ ಮಳೆಯಿಂದಾಗಿ ರಾಜ್ಯದಾದ್ಯಂತ ಸಾಕಷ್ಟು ಹಾನಿಯಾಗಿದೆ. ವಿಶೇಷವಾಗಿ ನದಿ ತೀರದ ಗ್ರಾಮಗಳ ರೈತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ. ಸಾವಿರಾರು ಚೀಲದ ಭತ್ತ ಅಕಾಲಿಕ ಮಳೆಯಿಂದ ನದಿಯಲ್ಲಿ ತೇಲಿಹೋಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರ ವಿವಿಧ ಬೇಡಿಕೆಗಳ ನಿರಂತರ ಹೋರಾಟದ ಪರಿಣಾಮವಾಗಿ, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆದಿ ರುವುದು ರೈತರಿಗೆ ಗೌರವವನ್ನು ನೀಡಿ ದಂತಾಗಿದೆ. ಮುಂಬರುವ ಸರ್ಕಾರ ಗಳು ರೈತರ ಪರವಾಗಿರುವಂತಹ ಚಿಂತನೆಗಳನ್ನು, ಯೋಜನೆಗಳನ್ನು ಜಾರಿಗೆ ತರಬೇಕು ಎಂದರು.
ಪಂಚಮಸಾಲಿ ತಾಲ್ಲೂಕು ಖಜಾಂಚಿ ಶಶಿಧರ ಪೂಜಾರ ಮಾತ ನಾಡಿ, ಇತ್ತೀಚೆಗೆ ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ತಲೆಬಾಗಿ ಕೆಲವು ನಿಬಂಧನೆಗಳ ಮೂಲಕ ಕೃಷಿ ಕಾಯ್ದೆ ಹಿಂಪಡೆದಿದೆ. ಆದರೆ ರೈತರಿಗೆ ಅನ್ಯಾಯವಾದಲ್ಲಿ ತಕ್ಷಣಕ್ಕೆ ಸರ್ಕಾರಗಳು ಸ್ಪಂದಿಸಬೇಕಿದೆ ಎಂದರು.
ಮುಖಂಡ ಪ್ರಕಾಶ್ ಪಾಟೀಲ್ ಮಾತನಾಡಿ, ಪ್ರಕೃತಿ ವಿಕೋಪದಿಂದ ರೈತರು ಭತ್ತದ ಬೆಳೆ ನಷ್ಟ ಅನುಭವಿಸುತ್ತಿದ್ದು, ಸರ್ಕಾರ ಸೂಕ್ತ ಪರಿಹಾರಕ್ಕೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಮೃತರಿಗೆ ಸಾಂತ್ವನ: ತಾಲ್ಲೂಕಿನ ಹಲವಾಗಲು ಗ್ರಾಮದ ನಿವೃತ್ತ ಶಿಕ್ಷಕ ಯಲಿಗಾರ ಮುದುಕಪ್ಪ, ಬೆನಕಶೆಟ್ಟಿ ಅಜ್ಜಪ್ಪ, ನಿವೃತ್ತ ಶಿಕ್ಷಕ ಪೂಜಾರ ಗುರುಮೂರ್ತೆಪ್ಪನವರು ಇತ್ತೀಚೆಗೆ ಕೋವಿಡ್ನಿಂದ ಮೃತಪಟ್ಟಿದ್ದು, ಇವರ ಮನೆಗಳಿಗೆ ವಚನಾನಂದ ಶ್ರೀಗಳು ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಗ್ರಾ.ಪಂ. ಸದಸ್ಯ ಪಿ.ಶಿವಕುಮಾರ, ನಾಗರಾಜ, ಹಲುವಾಗಲು ತಾಪಂ ಮಾಜಿ ಸದಸ್ಯ ಗಣೇಶ್, ಕರಿಬಸಪ್ಪ, ಸುರೇಶ್ ಶ್ಯಾನಭೋಗ, ಮಹೇಶ, ಚನ್ನನಗೌಡ, ಶಿವಣ್ಣ, ಲಿಂಗರಾಜಪ್ಪ, ರಮೇಶ್, ಪತ್ತಾರ ಮಹೇಶ್ವರಪ್ಪ, ದೇವೇಂದ್ರಪ್ಪ, ಬಿ.ಚನ್ನವೀರಪ್ಪ, ಚನ್ನಬಸಪ್ಪ, ಹೆಚ್.ಹೇಮಣ್ಣ ಸೇರಿದಂತೆ ಇತರರು ಇದ್ದರು.