ಎವಿಕೆ ಕಾಲೇಜಿನಲ್ಲಿನ ರಕ್ತದ ಗುಂಪು ಪರೀಕ್ಷೆಯಲ್ಲಿ ಇಎನ್‌ಟಿ ತಜ್ಞ ಡಾ. ಎ.ಎಂ. ಶಿವಕುಮಾರ್
ದಾವಣಗೆರೆ, ನ.16- ಉತ್ತಮ ಆರೋಗ್ಯಕ್ಕಾಗಿ ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾಧ್ಯಕ್ಷರೂ ಆದ ಇಎನ್‌ಟಿ ತಜ್ಞ ಡಾ. ಎ.ಎಂ. ಶಿವಕುಮಾರ್ ಕರೆ ನೀಡಿದ್ದಾರೆ.
ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ರೆಡ್‌ಕ್ರಾಸ್‌ನ ಅಂಗ ಸಂಸ್ಥೆ ರೆಡ್ ರಿಬ್ಬನ್ ಕ್ಲಬ್, ಕಾಲೇಜು ಆಡಳಿತ ಮಂಡಳಿ ಸಹಯೋಗದಲ್ಲಿ ಮೊನ್ನೆ ಆಯೋಜಿಸಿದ್ದ ರಕ್ತದ ಗುಂಪು ಪರೀಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನ ಜಗತ್ತಿನಲ್ಲಿ ಶ್ರೇಷ್ಠ ದಾನ ಎನಿಸಿಕೊಂಡಿದೆ. ದೇಹದಾನ, ನೇತ್ರದಾನವು ವ್ಯಕ್ತಿ ಗತಿಸಿದ ಬಳಿಕ ನಡೆಯುವ ಕ್ರಿಯೆಯಾಗಿವೆ. ಆದರೆ ರಕ್ತದಾನ, ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇದರಿಂದ ದಾನಿಗಳಿಗೆ ಧನ್ಯತಾ ಭಾವ ಪ್ರಾಪ್ತವಾಗುತ್ತದೆ ಎಂದು ಅವರು ಹೇಳಿದರು.
ರಕ್ತದಾನಕ್ಕೂ ಮೊದಲು ಪ್ರತಿ ವ್ಯಕ್ತಿ ಮುಖ್ಯವಾಗಿ ತಮ್ಮ ರಕ್ತದ ಗುಂಪನ್ನು ತಿಳಿದುಕೊಳ್ಳಬೇಕಿದೆ. ಅಪಘಾತ, ತುರ್ತು ಸಂದರ್ಭಗಳಲ್ಲಿ ಇದು ಸಹಾಯಕ್ಕೆ ಬರಲಿದೆ ಎಂದು ಶಿವಕುಮಾರ್ ಅವರು ತಿಳಿಸಿದರು.
ಜನರ ಹಣದಿಂದ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರ ಆರಂಭಿಸಲಾಗಿದೆ. ಹೀಗಾಗಿ ಬೇರೆ ಕೇಂದ್ರಗಳಿಗೆ ಹೋಗದೆ, ರೆಡ್‌ಕ್ರಾಸ್‌ನಲ್ಲಿ ರಕ್ತ ನೀಡಿದರೆ, ಬಡವರಿಗೆ ಕಡಿಮೆ ಹಣದಲ್ಲಿ ರಕ್ತ ಪೂರೈಸಬಹುದು ಎಂದರು.
ಎವಿಕೆ ಕಾಲೇಜು ಪ್ರಾಂಶುಪಾಲ ಡಾ. ಬಿ.ಪಿ. ಕುಮಾರ್ ಮಾತನಾಡಿ, ಕಾಲೇಜಿನಲ್ಲಿನ 1,605 ವಿದ್ಯಾರ್ಥಿನಿಯರಲ್ಲಿ 460 ಮಕ್ಕಳಿಗೆ ತಮ್ಮ ರಕ್ತದ ಗುಂಪು ತಿಳಿದಿಲ್ಲ. ಹೀಗಾಗಿ ಇದರ ಪರೀಕ್ಷೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಸಂಸ್ಥೆ ಸಹ ಸಂಯೋಜಕ ಡಿ.ಎನ್. ಶಿವಾನಂದ, ನ್ಯಾಕ್ ಸಹ ಸಂಯೋಜಕ ಹಾಗೂ ರೆಡ್ ರಿಬ್ಬನ್ ಕ್ಲಬ್ ಸಹ ಸಂಯೋಜಕರಾದ ಪ್ರಭಾವತಿ ಎಸ್. ಹೊರಡಿ ಇದ್ದರು.