ದಾವಣಗೆರೆ, ನ. 11- ತಾಲ್ಲೂಕಿನ ಅಣಬೇರು ಗ್ರಾಮದಲ್ಲಿ ನಾಡಿದ್ದು ದಿನಾಂಕ 13ರ ಶನಿವಾರ ಮತ್ತು 14 ರ ಭಾನುವಾರ ಶ್ರೀ ಈಶ್ವರ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಕುಕ್ಕುವಾಡೇಶ್ವರಿ ದೇವಿ ದೇವಸ್ಥಾನಗಳ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ.
13 ರ ಶನಿವಾರ ಸಂಜೆ ಗೋಧೂಳಿ ಲಗ್ನದಲ್ಲಿ ನೂತನ ದೇವರುಗಳನ್ನು ಗ್ರಾಮ ದರ್ಶನ ಮಾಡಿಸುವುದು. 14 ರ ಭಾನುವಾರ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ 4.30 ರಿಂದ 8.30 ರವರೆಗೆ ಗಂಗಾ ಪೂಜೆ, ಪುಣ್ಯಾಹ ನಾಂದಿ ಸಮಾರಾಧಸಿ ಪಂಚಕಲಶ ನವಗ್ರಹ ಮೃತ್ಯುಂಜಯ ಪೂಜೆ, ದೇವರುಗಳಿಗೆ ಕುಂಭಾಭಿಷೇಕ, ವಸ್ತ್ರಾಲಂಕಾರ, ಪುಷ್ಪಾಲಂಕಾರ, ಫಲ ಅಲಂಕಾರ ಹಾಗೂ ಶ್ರೀಗಳಿಂದ ಪ್ರಾಣ ಪ್ರತಿಷ್ಠಾಪನೆ, ನೇತ್ರೋನ್ಮಿಲನ, ಜೀವಕಳೆ ಕಳಸಾರೋಹಣ ನೆರವೇರಿಸಲಾಗುವುದು.
ಬೆಳಿಗ್ಗೆ 10.30 ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಕನಕ ಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ದೇವಸ್ಥಾನಗಳ ಸಮಿತಿ ಅಧ್ಯಕ್ಷ ಕೆ.ಸಿ. ರಾಜಪ್ಪ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಪ್ರೊ. ಎನ್. ಲಿಂಗಣ್ಣ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಣ ಬೇರು ಜೀವನಮೂರ್ತಿ, ಅಪೂರ್ವ ಹೋಟೆಲ್ ಗ್ರೂಪ್ಸ್ ಮಾಲೀಕ ಅಣಬೇರು ರಾಜಣ್ಣ, ಜಿ.ಪಂ. ಮಾಜಿ ಅಧ್ಯಕ್ಷರಾದ ಅಣಬೇರು ಪಾರ್ವತಮ್ಮ, ಶೈಲಜಾ ಬಸವರಾಜ್, ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಮಂಜುಳಾ ಶಿವಮೂರ್ತಿ, ಅಣಬೇರು ಗ್ರಾ.ಪಂ. ಅಧ್ಯಕ್ಷರಾದ ಕಾವ್ಯ ಬಿ.ಸಿ ಅಶೋಕ್ ಭಾಗವಹಿಸಲಿದ್ದಾರೆ.