ಡಿ.9 ಅದ್ಧೂರಿ ಸಮಾರಂಭ
ಡಿಸೆಂಬರ್ 9 ರಂದು 11 ಸಾವಿರ ಮಹಿಳೆಯರಿಗೆ ಸಮವಸ್ತ್ರದ ಸೀರೆಗಳು ಹಾಗೂ 11 ಮಹಿಳೆಯರಿಗೆ ಸ್ತ್ರೀ ಶಕ್ತಿ ಸಬ್ಸಿಡಿ ಚೆಕ್ ವಿತರಿಸಲಾಗುವುದು. ಈಗ ಮಾತು ಕೊಟ್ಟಿರುವ ಅಭಿವೃದ್ಧಿ ಕಾಮಗಾರಿ ಗಳನ್ನು ಪೂರೈಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನನ್ನ ಶಾಸಕತ್ವದ ಅವಧಿಯ ಎರಡನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತೇನೆ ಎಂದು ಶಾಸಕ ಅರುಣ ಕುಮಾರ ಪೂಜಾರ್ ವಿಶ್ವಾಸ ವ್ಯಕ್ತಪಡಿಸಿದರು.
ರಾಣೇಬೆನ್ನೂರು, ನ.9- ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ. ಆದರೂ ಸಹಿತ ನಿಮ್ಮಿಂದ ಸನ್ಮಾನ ಸ್ವೀಕರಿಸಿದಾಗ ಕೊಟ್ಟ ಮಾತು ಉಳಿಸಿಕೊಳ್ಳಲು ಸ್ನೇಹಿತರಿಗೆ ಹೇಳಿ ಕೆಲಸ ಮಾಡಿಸುತ್ತಿದ್ದೇನೆ. ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಹಣ ಬಂದೇ ಬರುತ್ತದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ತಾಲ್ಲೂಕಿನ ತುಮ್ಮಿನಕಟ್ಟೆ ಗ್ರಾಮದಲ್ಲಿ 6.75 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಸ್ತ್ರೀ ಶಕ್ತಿ ಬಳಗದ ಸಂಘಗಳಿಗೆ ಸಬ್ಸಿಡಿ ಚೆಕ್ ವಿತರಣೆ ಮಾಡಿ ಅವರು ಮಾತನಾಡಿದರು.
ಆರ್ಸಿಸಿ ಗಟಾರ, ರಸ್ತೆ, ಶಾದಿ ಮಹಲ್, ಶಾಲಾ ಕಟ್ಟಡ ಮುಂತಾದ ಕಾಮಗಾರಿಗಳ ಒಟ್ಟು ಹಣದಲ್ಲಿ ಕೇವಲ 75 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಎಲ್ಲ ಕಾಮಗಾರಿಗಳು ಆರು ತಿಂಗಳೊಳಗೆ ಮುಗಿಯಲಿವೆ. ಅಲ್ಪ ಸಂಖ್ಯಾತರ ಶಾದಿಮಹಲ್ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ಒಂದು ವರ್ಷದೊಳಗೆ ಮುಗಿಯಲಿದೆ ಎಂದು ಶಾಸಕರು ಹೇಳಿದರು.
ಗ್ರಾಮದ ಬೇಡಿಕೆಗಳಾದ ಗ್ರಾಮ ಠಾಣಾ ಹದ್ದು ವಿಸ್ತರಿಸುವ, ಬಡವರೇ ಹೆಚ್ಚಿರುವ ಈ ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿಸಲು ಕೈಗಾರಿಕೆ ತರುವುದರ ಜೊತೆಗೆ ಹೆಣ್ಣುಮಕ್ಕಳಿಗೆ ಗಾರ್ಮೆಂಟ್ ಅನ್ನು ತಾವೇ ಸ್ವತಃ ಪ್ರಾರಂಭಿಸುವುದಾಗಿ ಶಾಸಕರು ಭರವಸೆ ನೀಡಿದರು. ಇದುವರೆಗೂ ಆಡಿದ ಮಾತುಗಳನ್ನು ಉಳಿಸಿಕೊಂಡಿದ್ದು, ಇನ್ನು ಮುಂದೆಯೂ ಅದರಂತೆ ನಡೆಯುತ್ತೇನೆ ಎಂದು ಪೂಜಾರ ಹೇಳಿದರು.
ಶಾಸಕರ ಪತ್ನಿ ಮಂಗಳಗೌರಿ ಪೂಜಾರ, ಗ್ರಾ.ಪಂ. ಅಧ್ಯಕ್ಷರಾದ ಜ್ಯೋತಿ ಉಪ್ಪಿನ, ಉಪಾಧ್ಯಕ್ಷೆ ರತ್ನವ್ವ ಮಾರ್ಗಣ್ಣನವರ, ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಬಸವರಾಜ ಕೇಲಗಾರ, ಮುಖಂಡ ಮಂಜಯ್ಯ ಚಾವಡಿ, ನಾರಾಯಣ ದುರಗೆರೆ, ಅಂಬಿಕಾ ಶೇಷಗಿರಿ, ಮಂಜಣ್ಣ ಗಂಜಾಮದ, ಯಶೋಧ ಗಂಜಾಮದ ಇನ್ನಿತರರಿದ್ದರು.