ದಾವಣಗೆರೆ, ನ.9- ಕೈದಾಳೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುದ್ಧ ಜಲ ಅಭಿಯಾನ ಜಾಥಾ ನಡೆಯಿತು.
ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ನವ್ಯ ಸಂದೀಪ್ ಹಾಗೂ ಸದಸ್ಯರು ಮತ್ತು ಕೈದಾಳೆ ಒಕ್ಕೂಟದ ಅಧ್ಯಕ್ಷ ವೈ.ಟಿ. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿಕೊಂಡು ಬಂದಿದೆ. ಅದರಲ್ಲಿ ಶುದ್ಧಗಂಗಾ ಕಾರ್ಯಕ್ರಮವೂ ಒಂದು. ಕೇವಲ ಪ್ರತಿ ಲೀಟರ್‌ಗೆ 15 ಪೈಸೆಯಂತೆ 20 ಲೀಟರ್ ಕ್ಯಾನ್‌ಗೆ 3 ರೂ. ಪಡೆದು ಗ್ರಾಹಕರಿಗೆ ಶುದ್ಧ ನೀರು ವಿತರಿಸುತ್ತಿದೆ ಎಂದರು.
ಶುದ್ಧ ಜಲ ಅಭಿಯಾನ ಕಾರ್ಯಕ್ರಮ ಕುರಿತು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಟಿ. ಗುರುಮೂರ್ತಿ ಮಾತನಾಡಿ, ಫ್ಲೋ ರೈಡ್ ಮತ್ತು ಕಲುಷಿತ ಬೋರ್ ವೆಲ್ ನೀರು ಸೇವನೆಯಿಂದ ಜನರು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಶುದ್ಧ ನೀರನ್ನು ಬಳಸುವುದರಿಂದ ನಾವು ಆರೋಗ್ಯ ವಾಗಿರಬಹುದು ಎಂದರು.
ಶುದ್ಧಗಂಗಾ ಮೇಲ್ವಿಚಾರಕ ಸಿ.ಆರ್. ಮನು ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುದ್ಧಗಂಗಾ ಹೆಸರಿನಲ್ಲಿ ಇದುವರೆಗೆ 324 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಲೀಟರ್‌ಗೆ 15 ಪೈಸೆಯಂತೆ 90,000 ಬಳಕೆದಾರರು ದಿನವಹಿ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಶುದ್ಧ ನೀರು ಅನೇಕ ಕಾಯಿಲೆಗಳಿಗೆ ರಾಮಬಾಣವಿದ್ದಂತೆ ಎಂದು ತಿಳಿಸಿದರು.
ಸದಸ್ಯರಾದ ಕೇಶವಮೂರ್ತಿ, ಲಿಂಗರಾಜು, ರಾಕೇಶ್, ಅಶ್ವಿನಿ ಮತ್ತು ಇತರರು ಉಪಸ್ಥಿತರಿದ್ದರು.