ದಾಖಲೆ ಸಮೇತ ಬಹಿರಂಗ ಚರ್ಚೆಗೆ ಸಿದ್ಧ-ಜಗಳೂರಿನ ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಸವಾಲು

ಜಗಳೂರು, ನ.7-  ಶಾಸಕ ಎಸ್.ವಿ. ರಾಮಚಂದ್ರ ಅವರು ಕನ್ನಡ ರಾಜ್ಯೋತ್ಸವ ದಿನದಂದು ನನ್ನ ಆಸ್ತಿ ಗಳಿಕೆ, ನನ್ನ ಆಡಳಿತದ ಅವಧಿಯಲ್ಲಿ ಅಭಿವೃದ್ಧಿಗಳ ಬಗ್ಗೆ ಕುರಿತ ಚರ್ಚೆಗೆ ಆಹ್ವಾನಿಸಿರುವುದು ಸ್ವಾಗತಾರ್ಹ. ಅವರೇ ದಿನಾಂಕ ನಿಗದಿ ಮಾಡಿದರೆ, ದಾಖಲೆ
ಸಮೇತ ಕ್ಷೇತ್ರದ ಯಾವುದೇ ಸ್ಥಳದಲ್ಲಾದರೂ ಬಹಿರಂಗ ಚರ್ಚೆಗೆ ಆಗಮಿಸುವೆ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹಾಲಿ ಶಾಸಕರಿಗೆ ಸವಾಲು ಹಾಕಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಿನಾಂಕ ನಿಗದಿ ಮಾಡಲಿಲ್ಲವಾದರೆ, ತಪ್ಪು ಒಪ್ಪಿಕೊಂಡಂತೆ. ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಅವರ ಶ್ರಮದಿಂದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಗೊಂಡಿದೆ. ಶಾಸಕರು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ,  ಡಿಸೆಂಬರ್‌ನಲ್ಲಿ ನೀರು ತಂದರೆ  ಸ್ವಾಗತಾರ್ಹ. ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಹಿಂದಿನ ಜಲ ಸಂಪನ್ಮೂಲ ಸಚಿವರಾಗಿದ್ದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರಣ. ಅವರನ್ನು ಪಕ್ಷಭೇದ ಮರೆತು ಸನ್ಮಾನಿಸಲಾಗುವುದು ಎಂದರು.

ಕಾಂಗ್ರೆಸ್ ಪಕ್ಷದಿಂದ ಗೆದ್ದು ಭದ್ರಾ ಮೇಲ್ದಂಡೆ ನೆಪ ಹೇಳಿ, ವೈಯಕ್ತಿಕ ಅವಕಾಶಕ್ಕಾಗಿ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದು ಹಣ ಗಳಿಕೆಗಾಗಿ ಅಲ್ಲದೇ ಮತ್ತೇನು? ಎಂದು ಪ್ರಶ್ನಿಸಿದರು. ತಾಲ್ಲೂಕು ಆಡಳಿತ ಸಂಪೂರ್ಣ ಕುಸಿದಿದೆ. ಅಧಿಕಾರಿಗಳು ಲೋಕಾಯುಕ್ತರ ಬಲೆಗೆ ಬೀಳುತ್ತಿದ್ದಾರೆ. ಕ್ಷೇತ್ರದಲ್ಲಿ ಬಡವರಿಗೆ ಒಂದು ಸೂರು ಕಲ್ಪಿಸಿಲ್ಲ. ನಮ್ಮ ಆಡಳಿತಾವಧಿಯಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತವಾಗಿದ್ದು, ಕನಿಷ್ಟ ಪಕ್ಷ ರಿಪೇರಿ ಸಹ ಮಾಡಿಸಿಲ್ಲ ಎಂದು ದೂರಿದರು.

ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಇದುವರೆಗೂ ಗಂಗಾಕಲ್ಯಾಣ ಯೋಜನೆಯಡಿ ಬೋರ್‍ವೆಲ್ ಕೊರೆಸಿಲ್ಲ. ನರೇಗಾ ಯೋಜನೆ ಸ್ಥಗಿತವಾಗಿದೆ. ವಾಲ್ಮೀಕಿ ಜಯಂತಿ ಸರಳ ಆಚರಣೆ ಎಂದವರು, ಪಟ್ಟಣದಲ್ಲಿ ಫ್ಲೆಕ್ಸ್ ಯಾಕೆ ಅಳವಡಿಸಿದಿರಿ. ಎಲ್ಲಾ ಸಹೋದರ ಸಮಾಜದ ಮಹನೀಯರ ಜಯಂತಿಗಳಿಗೂ ಫ್ಲೆಕ್ಸ್ ಹಾಕಬೇಕಿತ್ತು ಎಂದು ಟೀಕಿಸಿದರು.

ಜಗಳೂರು ಸಬ್‌ ರಿಜಿಸ್ಟಾರ್, ಎನ್‍ಎ ಮಾಡಿಸದೆ ವಿಂಡ್ ಮಿಲ್ ಅಳವಡಿಕೆ ಕಂಪನಿಗಳಿಂದ ಪರ್ಸೆಂಟೇಜ್‌ ಪಡೆದು, ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ  ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ಎಸ್.ಟಿ. ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಎಸ್. ಮಂಜುನಾಥ್, ಷಂಷೀರ್ ಅಹಮ್ಮದ್, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ, ಶೇಖರಪ್ಪ, ಬಿ. ಲೋಕೇಶ್, ರೇವಣ್ಣ, ಗೋಡೆ ಪ್ರಕಾಶ್,  ಮಂಜುನಾಥ್, ಸಿದ್ದಪ್ಪ, ಗಣೇಶ್, ಶ್ರೀನಿವಾಸ್ ಸೇರಿದಂತೆ ಇದ್ದರು.

error: Content is protected !!