ಜಗಳೂರು ಕ್ಷೇತ್ರೋತ್ಸವದಲ್ಲಿ ಬೇಸಾಯ ತಜ್ಞ ಬಿ.ಓ ಮಲ್ಲಿಕಾರ್ಜುನ್ ಸಲಹೆ
ಜಗಳೂರು, ಅ.16- ಬರ ನಿರೋಧಕ, ಮಳೆಯಾಶ್ರಿತ ನವೀನ ನವಣೆ ತಳಿಯಾದ ಹೆಚ್ಎನ್- 46, ಉತ್ತಮವಾಗಿ ಬೆಳೆದಿದ್ದು, ಸ್ಥಳೀಯ ತಳಿಗಳಿಗಿಂತ ಅಧಿಕ ಇಳುವರಿ ಕೊಡುತ್ತದೆ ಎಂದು ಬೇಸಾಯ ತಜ್ಞ ಬಿ. ಓ ಮಲ್ಲಿಕಾರ್ಜುನ್ ತಿಳಿಸಿದರು.
ಜಗಳೂರು ತಾಲ್ಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಿನ್ನೆ ಹಮ್ಮಿಕೊಂಡಿದ್ದ ಅಧಿಕ ಇಳುವರಿ ನೀಡುವ ನವಣೆ ಬೆಳೆಯಲ್ಲಿ ಹೊಸ ತಳಿಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಹೊಸ ನವಣೆ ತಳಿಯ (ಹೆಚ್ಎನ್-46) ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.
ತಳಿಯು ಬಿತ್ತನೆಯಾದಾಗಿನಿಂದ ಇಲ್ಲಿ ತನಕ ಉತ್ತಮ ಮಳೆ ಬಂದಿದ್ದು, ಉತ್ತಮ ಇಳುವರಿ ಬರುವ ಲಕ್ಷಣಗಳಿವೆ ಎಂದು ತಿಳಿಸಿದ ಮಲ್ಲಿಕಾರ್ಜುನ್, ರೈತರು ಕೊಯ್ಲಾದ ನಂತರ ಬೀಜವನ್ನು ಶೇಖರಣೆ ಮಾಡಿ ಇತರೆ ರೈತರೊಂದಿಗೆ ಹಂಚಿಕೊಳ್ಳಬೇಕೆಂದು ತಿಳಿಸಿದರು.
ಪ್ರಗತಿಪರ ಹಾಗೂ ಪ್ರಾತ್ಯಕ್ಷಿಕೆ ರೈತರಾದ ಗುರುಮೂರ್ತಿ ಮಾತನಾಡಿ, ನವಣೆಯ ತೆನೆಗಳು ಒಂದು ಅಡಿಗಿಂತ ಉದ್ದವಿದ್ದು, ಎತ್ತರ ಕೂಡ ಬೆಳೆದಿವೆ. ನಮ್ಮ ಸ್ಥಳೀಯ ತಳಿಗಳಿಗಿಂತ ಈ ಹೊಸ ತಳಿಯು ಹತ್ತರಿಂದ ಹನ್ನೆರಡು ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳನ್ನು ಸೇವಿಸುವು ದರಿಂದ ಕೃಷಿಕರು ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದೆಂದು ತೋಟಗಾರಿಕೆ ತಜ್ಞ ಬಸವನಗೌಡ ತಿಳಿಸಿದರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸರಿಯಾದ ಸಮಯಕ್ಕೆ ಸಲಹೆ ಗಳನ್ನು ನೀಡಿ ಪ್ರೋತ್ಸಾಹಿಸು ತ್ತಿರುವುದರಿಂದ, ಬೆಳೆಯನ್ನು ರೈತರು ಉತ್ತಮವಾಗಿ ಬೆಳೆದಿದ್ದು, ಅಧಿಕ ಇಳುವರಿ ಬರುವ ನಿರೀಕ್ಷೆಯಲ್ಲಿದ್ದಾರೆ ಎಂದು ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟರು.