ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಬಿಜೆಪಿ ಹುನ್ನಾರ : ಎಸ್ಸೆಸ್‌

ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ  ಬಿಜೆಪಿ ಹುನ್ನಾರ : ಎಸ್ಸೆಸ್‌

ದಾವಣಗೆರೆ, ಸೆ. 26 – ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಟಾರ್ಗೆಟ್ ಮಾಡಿರುವ ಬಿಜೆಪಿ, ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಹುನ್ನಾರ ನಡೆಸಿದೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಆರೋಪಿಸಿದರು.

6ನೇ ವಾರ್ಡ್‍ನ ವಿಜಯನಗರ ಬಡಾವ ಣೆಯಲ್ಲಿ ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆ ಹಾಗೂ ಎಸ್‌ಎಫ್‌ಸಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರ ಜನಪರ ಆಡಳಿತವನ್ನು ಸಹಿಸದ ಬಿಜೆಪಿಯವರು ಸಿದ್ದರಾಮಯ್ಯ ಅವರನ್ನು ಸಹಿಸಿಕೊಳ್ಳುವುದು ಬಿಜೆಪಿಗೆ ಆಗುತ್ತಿಲ್ಲ. ಮುಡಾ ಪ್ರಕರಣದಲ್ಲಿ ಸಿದ್ಧರಾಮಯ್ಯ ಪಾತ್ರವೇನೂ ಇಲ್ಲ ಎಂಬುದು ಸ್ವತಃ ಬಿಜೆಪಿ ನಾಯಕರಿಗೇ ಗೊತ್ತಿದ್ದರೂ ಸಹ, ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದರೆ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವುದು ಸಾಧ್ಯ ಇಲ್ಲ ಎಂದು ಅವರ ವಿರುದ್ದ ಭ್ರಷ್ಟಾ ಚಾರದ ಆರೋಪ ಹೊರಿಸುತ್ತಿದ್ದಾರೆ ಎಂದರು.

ಸಿದ್ದರಾಮಯ್ಯನವರ ಪರ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮತ್ತು ಶಾಸಕರು ಇದ್ದಾರೆ. ಕರ್ನಾಟಕ ರಾಜ್ಯದ ಜನರ ಆಶೀ ರ್ವಾದ ಇದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಗರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಬಿಜೆಪಿ, ಜೆಡಿಎಸ್ ನಾಯಕರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರ ಭಾಗ್ಯ, ಕ್ಷೀರ ಧಾರೆ, ವಿದ್ಯಾಸಿರಿ, ಕೃಷಿಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ವಿರೋಧಿಸಿ ಜನರ ವಿರುದ್ದ ಇದ್ದು, ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ಸಿದ್ದರಾಮಯ್ಯನವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿದ್ದಾರೆ. ರಾಜಭವನದ ದುರ್ಬಳಕೆ ಮೂಲಕ ವಿರೋಧ ಪಕ್ಷಗಳ ಸರ್ಕಾರವನ್ನು ಹಣಿಯುವ ಸಂಚನ್ನು ಬಿಜೆಪಿ ಮಾಡುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊ ಳಿಸಲಾಗುತ್ತಿದ್ದು, ಈ ಭಾಗದ ಮಹಾನಗರ ಪಾಲಿಕೆ ಸದಸ್ಯರು ಬಿಜೆಪಿ ಧೋರಣೆ ಖಂಡಿಸಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಚಿಂತನೆಗೆ ಬೆಂಬಲಿಸುತ್ತಿದ್ದಾರೆ ಎಂದರು.

ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ ಮಾತನಾಡಿದರು.  ಈ ಸಂದರ್ಭದಲ್ಲಿ ಮಹಾಪೌರ ವಿನಾಯಕ ಪೈಲ್ವಾನ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಸದಸ್ಯರುಗಳಾದ ಎ. ನಾಗರಾಜ್, ಎ.ಬಿ.ರಹೀಂಸಾಬ್, ಆಯುಕ್ತರಾದ ಶ್ರೀಮತಿ ರೇಣುಕಾ, ಮುಖಂಡರುಗಳಾದ ಎಲ್.ಜಿ. ಬಸವರಾಜ್, ಇಟ್ಟಿಗುಡಿ ಮಂಜುನಾಥ್, ಜಗದೀಶ್, ಗೀತಾ ಚಂದ್ರಶೇಖರ್, ಎಲ್.ಜಿ. ಪರಶುರಾಮ್, ರುದ್ರಪ್ಪ, ಹನುಮಂತಪ್ಪ ಮತ್ತಿತರರಿದ್ದರು.

error: Content is protected !!