ಮಾನ್ಯರೇ,
ಬೆಂಗಳೂರು ಮೆಟ್ರೋದಲ್ಲಿ ಬಟ್ಟೆ ಕೊಳಕಾಗಿವೆ ಎಂಬ ಕಾರಣಕ್ಕೆ ರೈತರಿಬ್ಬರಿಗೆ ಮೆಟ್ರೋ ಪ್ರವೇಶ ನಿರಾಕರಿಸಿದ್ದ ವಿಡಿಯೋ ವೈರಲ್ ಆದ ಬಳಿಕ ಸಾರ್ವಜನಿಕರ ಆಕ್ರೋಶಕ್ಕೂ ತುತ್ತಾಗಿತ್ತು. ಅದರಂತೆಯೇ ಇನ್ನೊಂದು ವಿಡಿಯೋದಲ್ಲಿ, ಒಬ್ಬ ಮುಗ್ಧ ರೈತರೊಬ್ಬರಿಗೆ ಇ-ಕೆವೈಸಿ ಮಾಡಿಸಲು ಆಧಾರ್ ಲಿಂಕ್ ಇರೋ ಫೋನ್ ತಗೊಂಡು ಬಾ ಎಂದರೆ ಲ್ಯಾಂಡ್ ಲೈನ್ ಫೋನ್ ತಂದ ವಿಡಿಯೋ ಕೂಡ ವೈರಲ್ ಆಗಿತ್ತು. ಈ ಎರಡೂ ವಿಡಿಯೋಗಳಿಗೂ ಒಂದಕ್ಕೊಂದು ಸಾಮ್ಯತೆ ಇದ್ದರೂ ಕೂಡ ಸಂದರ್ಭ ಮಾತ್ರ ಬೇರೆ ಬೇರೆ.
ಇತ್ತೀಚಿನ ದಿನಗಳಲ್ಲಿ ಮುಗ್ಧ ಅನಕ್ಷರಸ್ಥ ರೈತರನ್ನು ಅವಮಾನಿಸಿ, ವಿಕೃತ ಆನಂದ ಪಡುತ್ತಿರುವ ವಿದ್ಯಾವಂತರ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ರೈತ ದೇಶದ ಬೆನ್ನೆಲುಬು. ಅವರು ಬೆಳೆದಿರುವ ಅನ್ನವನ್ನೇ ತಿಂದು ಅವಮಾನಿಸುವವರಿಗೆ ನನ್ನದೊಂದು ಧಿಕ್ಕಾರವಿರಲಿ. ಎಸಿ ರೂಮಲ್ಲಿ ಕೆಲಸ ಮಾಡಿದಷ್ಟು ಸುಲಭವಲ್ಲ ರೈತರ ಕೆಲಸ. ಕನಿಷ್ಠ ಮಾನವೀಯ ಮೌಲ್ಯ, ಸಾಮಾಜಿಕ ಕಳಕಳಿ ಇಲ್ಲದಿದ್ದ ಮೇಲೆ ಎಷ್ಟೇ ಪದವಿ ಪಡೆದರೂ ವ್ಯರ್ಥವೇ. ರೈತರನ್ನು ಗೌರವಿಸಿ, ಪ್ರೋತ್ಸಾಹಿಸಿ, ಬೆಂಬಲಿಸೋಣ.
– ಮುರುಗೇಶ ಡಿ, ದಾವಣಗೆರೆ.