ಹಾಟ್ ಏರ್ ಬಲೂನ್ ಹಾರಾಟದ ಮೂಲಕ ಮತದಾನ ಜಾಗೃತಿ
ದಾವಣಗೆರೆ, ಮಾ.17 – ಪ್ರಜಾಪ್ರಭು ತ್ವದಲ್ಲಿ ಎಲ್ಲರ ಸಹಭಾಗಿತ್ವ ಅವಶ್ಯಕ, ಎಲ್ಲರೂ ಲೋಕಸಭಾ ಚುನಾವಣಾ ಹಬ್ಬ ದಲ್ಲಿ ಭಾಗವಹಿಸುವ ಮೂಲಕ ಪ್ರಜಾತಂತ್ರ ವನ್ನು ಆರಾಧಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಕರೆ ನೀಡಿದರು.
ಶನಿವಾರ ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ಯುವಜನ ಕ್ರೀಡಾ ಇಲಾಖೆ ಹಾಗೂ ಮಾ ಸಾಹಸ ಕ್ರೀಡಾ ಅಕಾಡೆಮಿ ಸಹಭಾಗಿತ್ವದಲ್ಲಿ ಮತದಾರರ ಜಾಗೃತಿಗೆ ಆಯೋಜಿಸಲಾದ ಹಾಟ್ ಏರ್ ಬಲೂನ್ ತರಬೇತಿಗೆ ಚಾಲನೆ ನೀಡಿ ಖುದ್ದು ಹಾರಾಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆ ನಡೆಯು ತ್ತಿದ್ದು, ದಾವಣಗೆರೆ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದೆ. ಯುವ ಮತದಾ ರರು ಏಪ್ರಿಲ್ 9 ರೊಳಗಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡುವ ಮೂಲಕ ಚುನಾವಣೆಯಲ್ಲಿ ಮತ ಚಲಾಯಿಸಬೇಕೆಂದರು.
ಒಂದು ಮತ ಅನೇಕ ಅಶ್ವಶಕ್ತಿಗೆ ಸಮ ವಾಗಿದ್ದು ಯಾರೂ ಸಹ ಮತದಾನದಿಂದ ಹೊರಗುಳಿಯದೇ ಮತದಾನ ಮಾಡಬೇಕೆಂದ ಅವರು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ಮತದಾರರ ಪಟ್ಟಿಯನ್ನು ಅವಲೋಕಿಸಿ ಸೇರ್ಪಡೆ ಮತ್ತು ತಿದ್ದುಪಡಿ ಇದ್ದಲ್ಲಿ ಏಪ್ರಿಲ್ 9 ರೊಳಗಾಗಿ ಸಲ್ಲಿಸಬಹುದು. ಚುನಾವಣೆಗೆ ಸಂಬಂಧಿಸಿದ ಸಹಾಯಕ್ಕಾಗಿ 1950 ಟೋಲ್‍ಫ್ರೀ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ, ಯುವಜನ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿಬಾಯಿ, ಯುವ ಪ್ರಶಸ್ತಿ ಪುರಸ್ಕೃತ ಮಾಗಾನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.