ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೌಲಭ್ಯಕ್ಕೆ ಎಐಡಿಎಸ್‌ಓ ಆಗ್ರಹ

ದಾವಣಗೆರೆ, ಜೂ. 23 – ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್, ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವುದು, ಪಠ್ಯಕ್ರಮದ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮನಿರಪೇಕ್ಷ ವಾತಾವರಣವನ್ನು ರಕ್ಷಿಸಿ, ವಿದ್ಯಾರ್ಥಿ ವೇತನ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಖಾತ್ರಿ ಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಲ್‌ ಇಂಡಿಯಾ ಡೆಮಾಕ್ರೆಟಿಕ್ ಸ್ಟುಡೆಂಟ್ ಆರ್ಗನೈಜೇಶನ್ (ಎಐಡಿಎಸ್‌ಓ) ರಾಜ್ಯ ಸಮಿತಿ ಒತ್ತಾಯಿಸಿದೆ.

ಎನ್‌ಇಪಿ-2020, ಅಪ್ರಜಾತಾಂತ್ರಿಕ ಹೇರಿಕೆಯನ್ನು ಕೈಬಿಡಬೇಕು. ಸ್ವ ಹಣಕಾಸು ಸಂಸ್ಥೆಗಳನ್ನು ರಚಿಸುವುದನ್ನು ನಿಲ್ಲಿಸಿ, ತಾರತಮ್ಯವಿಲ್ಲದೇ ಎಲ್ಲಾ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುವಂತೆ, ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡಿ, ಅತಿಥಿ ಶಿಕ್ಷಕರ ಹಕ್ಕುಗಳನ್ನು ರಕ್ಷಿಸುವಂತೆ ಸಮಿತಿ ರಾಜ್ಯ ಅಧ್ಯಕ್ಷರಾದ ಕೆ.ಎಸ್. ಅಶ್ವಿನಿ, ಕಾರ್ಯದರ್ಶಿ ಅಜಯ್ ಕಾಮತ್ ಮನವಿ ಮಾಡಿದ್ದಾರೆ.

ರಾಜ್ಯದ ವಿದ್ಯಾರ್ಥಿಗಳು ಅನೇಕ ವರ್ಷಗಳಿಂದ ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದಾರೆ. ಸರ್ಕಾರ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಹೇಳಿದ್ದಾರೆ.

ಎನ್‌ಇಪಿಯಿಂದ ಉಂಟಾಗಿರುವ ಗೊಂದಲದಿಂದಾಗಿ ಪದವಿ ಕಾಲೇಜುಗಳು ಇನ್ನು ಚೇತರಿಸಿಕೊಂಡಿಲ್ಲ. ಬಹು ಪ್ರಿಯ ಶಿಸ್ತೀಯ ಅಧ್ಯಯನದ ಹೆಸರಿನಲ್ಲಿ ಶಿಕ್ಷಣವನ್ನು ಬುಡಮೇಲು ಮಾಡಲು ಹೊರಟಿರುವ ಎನ್‌ಇಪಿ ಕುರಿತಾಗಿ, ಯಾವೊಬ್ಬ ಶಿಕ್ಷಕರಿಗೂ ಸಮ್ಮತಿ ಇಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದ ಅನೇಕ ಪದವಿ ಕಾಲೇಜುಗಳನ್ನು ಈಗಾಗಲೇ ಸ್ವಾಯತ್ತ ಸಂಸ್ಥೆಗಳನ್ನಾಗಿ ಮಾಡಲಾಗಿದೆ. ಮುಂದೆ ಅದು ಸ್ವ ಹಣಕಾಸಿನ ವಿಶ್ವವಿದ್ಯಾಲಯಗಳು ಆದಲ್ಲಿ ಬಡ ವಿದ್ಯಾರ್ಥಿಗಳಿಂದ ಉನ್ನತ ಶಿಕ್ಷಣವನ್ನು ಕಸಿದಂತಾಗುತ್ತದೆ. ಸ್ವ ಹಣಕಾಸಿನ ಸಂಸ್ಥೆಗಳನ್ನು ರಚಿಸುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದ್ದಾರೆ. 

error: Content is protected !!