ದಾವಣಗೆರೆ, ಮೇ 21- ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯು ಮೆಟ್ರಿಕ್ ನಂತರದ ಉದ್ಯೋಗ ಭರವಸೆಯ ಪಾಲಿಮರ್ ಮತ್ತು ಪ್ಲಾಸ್ಟಿಕ್ ಆಧಾರಿತ ಕೋರ್ಸ್‌ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸಿಪೆಟ್ ಸಹಾಯಕ ತಾಂತ್ರಿಕ ಅಧಿಕಾರಿಗಳಾದ ಲಕ್ಷ್ಮಣ್ ಹಾಗೂ ಡಿ.ಎಲ್. ಶ್ರೀನಾಥ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಿಪೆಟ್ ಸಂಸ್ಥೆಯು ಭಾರತ ಸರ್ಕಾರದ ರಸಾಯನ ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ. ಪ್ಲಾಸ್ಟಿಕ್ ಉತ್ಪನ್ನಗಳು ದೇಶದ ಪ್ರಗತಿಗೂ ತಮ್ಮದೇ ಆದ ಕೊಡುಗೆ ನೀಡಿವೆ. ಹಾಗಾಗಿ ಇವುಗಳ ತಯಾರಿ ಉತ್ತೇಜಿಸಲು ಕೇಂದ್ರ ಸರ್ಕಾರ ಪೆಟ್ರೋಕೆಮಿಕಲ್ ಇಂಜಿನಿಯರ್ ಮತ್ತು ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸಿದೆ ಎಂದರು.
1958 ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಕರ್ನಾಟಕದಲ್ಲಿ ಮೈಸೂರಲ್ಲಿ ಮಾತ್ರ ಇದ್ದು, ಪಾಲಿಮರ್ ಮತ್ತು ಪ್ಲಾಸ್ಟಿಕ್ ಕೈಗಾರಿಕೆ ಕುರಿತ ಕೋರ್ಸ್‌ಗಳನ್ನು ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆ ಇದಾಗಿದೆ. ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸ್ಥಾಪಿಸಿದ ದೇಶದ 40 ಕಡೆಗಳಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕೃಷಿ, ಆರೋಗ್ಯ, ಸಾರಿಗೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಪಾಲಿಮರ್, ಪ್ಲಾಸ್ಟಿಕ್ಸ್ ಅವಶ್ಯಕತೆ ಇದ್ದೇ ಇದೆ. ಇಂತಹ ಪ್ಲಾಸ್ಟಿಕ್ಸ್ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿದೆ. ಕೇಂದ್ರ ಸರ್ಕಾರ ಕೇಂದ್ರೀಯ ಪೆಟ್ರೋಕೆಮಿಕಲ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ, ತಂತ್ರಜ್ಞಾನ, ಸಂಶೋಧನೆ ವ್ಯವಸ್ಥೆಯಲ್ಲಿ ಸ್ನಾತಕ ಡಿಪ್ಲೋಮಾ, ಡಿಪ್ಲೋಮಾ ಕೋರ್ಸ್ ನೀಡಲಾಗುತ್ತದೆ ಎಂದರು.
10 ನೇ ತರಗತಿ ಪಾಸಾದವರಿಗೆ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (ಡಿಪಿಟಿ) ಹಾಗೂ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (ಡಿಪಿಎಂಟಿ) ಮೂರು ವರ್ಷಗಳ ಅವಧಿಯ ಕೋರ್ಸ್, ಪಿಯುಸಿ (ಪಿಸಿಎಂ) ಮಾಡಿದವರಿಗೆ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ, ಐಟಿಐ (ಫಿಟ್ಟರ್, ಮೆಷಿನಿಸ್ಟ್, ಟರ್ನರ್) ಆದವರಿಗೆ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (ಡಿಪಿಎಂಟಿ) ಎರಡು ವರ್ಷಗಳ ಅವಧಿಯ ಕೋರ್ಸ್ ನಡೆಸಲಾಗುತ್ತಿದೆ. ಅದರಂತೆ ಬಿಎಸ್ಸಿ ಆದವರಿಗೂ ಸಹ ಕೋರ್ಸ್‌ಗಳನ್ನು ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿಗಾಗಿ ಲಕ್ಷ್ಮಣ್ (9845873498) ಹಾಗೂ ಡಿ.ಎಲ್. ಶ್ರೀನಾಥ್ (9380756048) ಇವರನ್ನು ಸಂಪರ್ಕಿಸಬಹುದು.