ಹರಿಹರದಲ್ಲಿ ಕೊರೊನಾ ಜಾಗೃತಿ ಅಭಿಯಾನ

ಹರಿಹರ,ಅ.27- ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಸೋಂಕು ಹರಡದಂತೆ ತಡೆಯಲು ಸಾರ್ವಜನಿಕರ ಸಹಕಾರ ಅತೀ ಮುಖ್ಯ. ಅದಕ್ಕಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಿತ್ತಿಚಿತ್ರ-ಬರಹಗಳನ್ನು ಬರೆದು ಬಿಡುಗಡೆ ಮಾಡಿ, ಹರಿಹರದ ಪ್ರಮುಖ ಸ್ಥಳಗಳಲ್ಲಿ ಅಂಟಿಸಲಾಯಿತು. 

ಈ ಚಿತ್ರಗಳನ್ನು ಹರಿಹರದ ಗುರು ದ್ರೋಣಾಚಾರ್ಯ ಸಮ್ಮಾನ ಚಿತ್ರಕಲಾವಿದ ಡಾ. ಜಿ.ಜೆ ಮೆಹೆಂದಳೆ ಅವರು ಬರೆದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಭಿತ್ತಿ ಚಿತ್ರಗಳನ್ನು ಶಹರ ಪೊಲೀಸ್ ಠಾಣೆಯ ಉಪನೀರೀಕ್ಷಕರಾದ ಶ್ರೀಮತಿ ಶೈಲಶ್ರೀ ಅನಾವರಣಗೊಳಿಸಿ  ಮಾತನಾಡಿ, ಈಗ ಬರುವ ಹಬ್ಬದ ಸಂದರ್ಭದ ಸಂತೋಷದಲ್ಲಿ ಜನರು ಬೇಕಾಬಿಟ್ಟಿ ತಿರುಗದೇ ಕೊರೊನಾ ಇರುವ ಬಗ್ಗೆ ಗಮನದಲ್ಲಿಟ್ಟುಕೊಂಡು ಮಾಸ್ಕ್ ಹಾಕುವುದನ್ನು ಮರೆಯದೇ, ಅಂತರದಲ್ಲಿದ್ದುಕೊಂಡು ಕೈಗಳನ್ನು ಆಗಾಗ ತೊಳೆಯುವುದು ಹಾಗೂ ಸ್ಯಾನಿಟೈಜರ್ ಬಳಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ನುಡಿದರು.  

ಅತಿಥಿಗಳಾಗಿ ಆಗಮಿಸಿದ್ದ ನಗರಸಭಾ ಸದಸ್ಯರಾದ ಶ್ರೀಮತಿ ನಿಂಬಕ್ಕ ಚಂದಾಪುರ ಮಾತನಾಡಿ, ಸಾರ್ವಜನಿಕರು ಮನೆಯಿಂದ ಹೊರಡುತ್ತಲೇ ತಮ್ಮ ಕರ್ತವ್ಯವೆಂದು ತಿಳಿದು ಕಡ್ಡಾಯವಾಗಿ ಮಾಸ್ಕ್ ಧರಿಸಿ ಹೊರಡಬೇಕು. ಪೊಲೀಸರು ದಂಡ ಹಾಕುವರೆಂದು ಭಯದಿಂದ ಮಾಸ್ಕ್ ಧರಿಸದೆ, ತಮ್ಮ ಕುಟುಂಬದ ಸುರಕ್ಷತೆಗಾಗಿ ಮಾಸ್ಕ್ ಧರಿಸಿರಿ ಎಂದರು.

ಡಾ. ಜಿ.ಜೆ. ಮೆಹೆಂದಳೆ ಅವರು ಮಾಸ್ಕ್ ನಮ್ಮ ಆರೋಗ್ಯಕ್ಕಾಗಿ. ಮಾಸ್ಕ್ ನಮ್ಮ ಸುರಕ್ಷತೆಗಾಗಿ, ಮಾಸ್ಕ್ ನಮ್ಮ ಕುಟುಂಬದ ಸಂರಕ್ಷಣೆಗಾಗಿ ಎಂದು ಸಾರುವ ಹಲವಾರು ಭಿತ್ತಿ ಬರಹಗಳನ್ನು ರಚಿಸಿದ್ದಾರು. ಭಿತ್ತಿ ಬರಹಗಳನ್ನು ಹೋಟೆಲ್, ತರಕಾರಿ ಅಂಗಡಿ, ಬೇಕರಿ, ಔಷಧಿ ಅಂಗಡಿಗಳು ಹಾಗೂ ನಗರ ರಸ್ತೆಯ ಇಬ್ಬಾಗಗಳಲ್ಲಿ ಅಂಟಿಸಲಾಯಿತು. 

ಕಾರ್ಯಕ್ರಮದಲ್ಲಿ ಗುರು ಜಗಳೂರು, ಪ್ರೊ.ಭಿಕ್ಷಾವರ್ತಿ ಮಠ, ರವಿ ಹೋವಳೆ, ಬಿಜೆಪಿ ಮುಖಂಡ ಶ್ರೀನಿವಾಸ ಚಂದಾಪುರ, ಜೈ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಗೋವಿಂದ, ರವಿ ಮೊಬೈಲ್ಸ್, ಪೊಲೀಸ್ ಸಿಬ್ಬಂದಿ ಶಿವಕುಮಾರ್ , ಶ್ರೀಮತಿ ನೇತ್ರಾವತಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!