ದಾವಣಗೆರೆ, ಮೇ 30- ಬೈಕ್‌ನಲ್ಲಿ ಡ್ರಾಪ್ ಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬ ವೃದ್ದೆಯ ಬಳಿ ಇದ್ದ ಬಂಗಾರದ ಸರ ಕಿತ್ತುಕೊಂಡು ಹೋದ ಘಟನೆ ಹರಿಹರ ತಾಲ್ಲೂಕು ಉಕ್ಕಡಗಾತ್ರಿ ಬಳಿಯ ನಿಟ್ಟುಪಳ್ಳಿ ಬಳಿ ನಡೆದಿದೆ.
ಹಳೇ ಹರಲಾಪುರದ ವಾಸಿ ಕಮಲಮ್ಮ (60) ಸಂಬಂಧಿಕರ ತೊಟ್ಟಿಲು ಕಾರ್ಯದಲ್ಲಿ ಪಾಲ್ಗೊಳ್ಳಲು ನಿಟ್ಟಪಳ್ಳಿ ಗ್ರಾಮಕ್ಕೆ ಹೋಗಲು ಹರಿಹರದಿಂದ ಉಕ್ಕಡಗಾತ್ರಿ ಗ್ರಾಮಕ್ಕೆ ಹೋಗಿದ್ದರು.
ಅಲ್ಲಿಂದ ನಿಟ್ಟಪಳ್ಳಿಗೆ ಹೋಗಲು ಉಕ್ಕಡಗಾತ್ರಿ ಗ್ರಾಮದ ಆಂಜನೇಯ ದೇವಸ್ಥಾನದ ಹತ್ತಿರ ಬಸ್‌ಗಾಗಿ ಕಾಯುತ್ತಿರಲು, ಯುವಕನೊಬ್ಬ ಬಂದು ತಾನು ಹೊಳೆ ಆನವೇರಿಗೆ ಹೋಗುವುದಾಗಿಯೂ, ಮಾರ್ಗಮಧ್ಯದಲ್ಲಿ ನಿಮ್ಮನ್ನು ನಿಟ್ಟಪಳ್ಳಿಗೆ ಬಿಟ್ಟು ಹೋಗುವುದಾಗಿ ಹೇಳಿದ್ದಾನೆ.
ಬೇಡ ತಾನು ಬಸ್ಸಿಗೆ ಹೋಗುವುದಾಗಿ ಮಹಿಳೆ ಹೇಳಿದ್ದರೂ, ಬಲವಂತ ಮಾಡಿದ್ದರಿಂದ ಮಹಿಳೆ ಒಲ್ಲದ ಮನಸ್ಸಿನಿಂದ ಬೈಕ್ ಹತ್ತಿದ್ದಾರೆ. 1 ಕಿ.ಮೀ. ದೂರ ಹೋದ ನಂತರ ಮೂತ್ರ ವಿಸರ್ಜನೆ ಮಾಡುವುದಾಗಿ ಹೇಳಿ ಬೈಕ್ ನಿಲ್ಲಿಸಿ, ಮಹಿಳೆಯ ಕೊರಳಲ್ಲಿದ್ದ ಬಂಗಾರದ ಸರ ಕಿತ್ತುಕೊಳ್ಳಲು ಯತ್ನಿಸಿದಾಗ ಮಹಿಳೆ ಸರ ಹಿಡಿದಿಕೊಂಡಿದ್ದರಿಂದ 11 ಗ್ರಾಂ ಸರದ ತುಂಡು ಮಹಿಳೆಯ ಕೈಯಲ್ಲಿಯೇ ಉಳಿದಿದ್ದು, ಉಳಿದ 1.45 ಲಕ್ಷ ರೂ. ಬೆಲೆಯ 34 ಗ್ರಾಂ. ತೂಕದ ಬಂಗಾರದ ಸರವನ್ನು ಯುವಕ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ಕಮಲಮ್ಮ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.