ಉಕ್ಕಡಗಾತ್ರಿ : ಅಜ್ಜಯ್ಯನ ಜಾತ್ರೆಗೆ ಚಾಲನೆ ಸುಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಿ

ಉಕ್ಕಡಗಾತ್ರಿ : ಅಜ್ಜಯ್ಯನ ಜಾತ್ರೆಗೆ ಚಾಲನೆ ಸುಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಿ

ಭಕ್ತರಿಗೆ ನಂದಿಗುಡಿ ಶ್ರೀಗಳ ಮನವಿ

ಇಂದು ಅಜ್ಜಯ್ಯನ ಮಹಾ ರಥೋತ್ಸವ

ಮಲೇಬೆನ್ನೂರು, ಫೆ.20- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಒಂದು ವಾರ ಕಾಲ ನಡೆಯಲಿರುವ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ  ನಂದಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.

ನಂತರ ದೀಪ ಬೆಳಗಿಸಿ, ಜಾತ್ರಾ ಮಹೋತ್ಸವದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಸಿದ್ದರಾಮೇಶ್ವರ ಶ್ರೀಗಳು ಆಶೀರ್ವಚನ ನೀಡಿ, ಉಕ್ಕಡಗಾತ್ರಿ ಕ್ಷೇತ್ರ ರಾಜ್ಯದಲ್ಲಿ ಅಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ಸಾಕಷ್ಟು ಭಕ್ತರನ್ನು ಹೊಂದಿದ್ದು, ಅಜ್ಜಯ್ಯನ ಪವಾಡಗಳಿಂದಾಗಿ ಭಕ್ತರ ಕಷ್ಟಗಳು ದೂರವಾಗಿ ಸುಖ-ಶಾಂತಿ-ನೆಮ್ಮದಿಯಿಂದ ಬದುಕುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.

ಶ್ರೀ ಗುರು ಕರಿಬಸವೇಶ್ವರ ಗದ್ದುಗೆ ಟ್ರಸ್ಟ್‌ ಕಮಿಟಿ ಕಾರ್ಯದರ್ಶಿ ಎಸ್‌. ಸುರೇಶ್‌ ಮಾತನಾಡಿ, ಜಾತ್ರೆ ಸಂದರ್ಭದಲ್ಲಿ ಭಕ್ತರು ಬಟ್ಟೆಗಳನ್ನು ನದಿಗೆ ಹಾಕಬಾರದು. ನಿಂಬೆಹಣ್ಣುಗಳನ್ನು ಕಾಲಿನಿಂದ ತುಳಿಯದೆ ಉಟಕ್ಕೆ ಬಳಸಬೇಕು.ಗುಟ್ಕಾ ಹಾಕಿಕೊಂಡು ಎಲ್ಲೆಂದರಲ್ಲ ಉಗುಳಬೇಡಿ. ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಿ ಎಂದು ಮನವಿ ಮಾಡಿದರು.  

ಗದ್ದುಗೆ ಟ್ರಸ್ಟ್‌ ಕಮಿಟಿಯ ಗದಿಗೆಯ್ಯ ಪಾಟೀಲ್‌, ಪ್ರಕಾಶ್‌ ಕೋಟೇರ್‌, ಬಸವನಗೌಡ ಪಾಳೇದ್, ಗದಿಗೆಪ್ಪ ಹೊಸಳ್ಳಿ, ವೀರನಗೌಡ ಹಲಗಪ್ಪರ, ಆನಂದ್‌ ಪಾಟೀಲ್‌, ವೀರಭ್ರಗೌಡ ಕೋಟೇರ್‌, ಗ್ರಾ.ಪಂ. ಸದಸ್ಯ ಭರಮಗೌಡ ಶಿವಪೂಜೆ, ವಿಷ್ಣುಗೌಡ ಜಿಗಳಿ, ಪರಮೇಶ್ವರಪ್ಪ ಬೇವಿನಹಳ್ಳಿ, ಯುವ ಕಲಾವಿದ ಅಜಯ್‌ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಬೆಳಿಗ್ಗೆ ಅಮಾವಾಸ್ಯೆ ಅಂಗವಾಗಿ ಅಜ್ಜಯ್ಯನ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕಗಳನ್ನು ಮಾಡಲಾಯಿತು.

ಭಕ್ತರ ದಂಡು : ದೂರದ ಊರುಗಳಿಂದ ಸಾಕಷ್ಟು ಭಕ್ತರು ಸೋಮವಾರವೇ ಕ್ಷೇತ್ರಕ್ಕೆ ಆಗಮಿಸಿದ್ದು, ದೇವಸ್ಥಾನದ ಪ್ರಾಂಗಣ, ವಸತಿ ನಿಲಯಗಳು, ಕಲ್ಯಾಣ ಮಂಟಪಗಳು ಜನರಿಂದ ತುಂಬಿ ತುಳುಕುತ್ತಿದ್ದವು.

ಕೆಲವರು ತುಂಗಭದ್ರಾ ನದಿಯ ನಡುಗಡೆಯಲ್ಲಿ ಬಿಡಾರ ಹಾಕಿ ತಂಗಿದ್ದಾರೆ. ಹರಕೆ ಹೊತ್ತ ಭಕ್ತರು ಮಾಲಾಧಾರಿಗಳಾಗಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದರು. 

ಇಂದು ರಥೋತ್ಸವ : ಮಂಗಳವಾರ ಬೆಳಿಗ್ಗೆ 8.30 ಕ್ಕೆ ನಂದಿಗುಡಿ ಶ್ರೀಗಳು ರಥಕ್ಕೆ ಪೂಜೆ ಸಲ್ಲಿಸಿದ ನಂತರ ಅಜ್ಜಯ್ಯ ಮಹಾರಥೋತ್ಸವ ಜರುಗಲಿದೆ.

error: Content is protected !!