ಹಳ್ಳಿಹಾಳ್ ಮಟ್ಟಿ ಕ್ಯಾಂಪ್ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಅರ್ಜಿ

ಹಳ್ಳಿಹಾಳ್ ಮಟ್ಟಿ ಕ್ಯಾಂಪ್ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಅರ್ಜಿ

ಮಲೇಬೆನ್ನೂರು, ಏ.23- ಚುನಾವಣೆ ಬಹಿಷ್ಕಾರ ಮಾಡುವುದಾಗಿ ಹೇಳಿದ್ದ ಹಳ್ಳಿಹಾಳ್ ಮಟ್ಟಿ ಕ್ಯಾಂಪ್ ಗ್ರಾಮಸ್ಥರು ಮಂಗಳವಾರ ಅಧಿಕಾರಿಗಳ ಭರವಸೆಯ ಮೇರೆಗೆ ಮತದಾನ ಮಾಡುವ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಹಳ್ಳಿಹಾಳ್ ಮಟ್ಟಿ ಕ್ಯಾಂಪ್‌ನಿಂದ ಹಳ್ಳಿಹಾಳ್ ಗ್ರಾಮದವರೆಗಿನ ರಸ್ತೆ ದುರಸ್ತಿ ಮಾಡಿಸುವಂತೆ ಈ ಹಿಂದೆ ಜನಪ್ರತಿನಿಧಿಗಳಿಗೆ ಮತ್ತು ಡಿಸಿ, ತಹಶೀಲ್ದಾರ್ ಹಾಗೂ ಕೊಕ್ಕನೂರು ಗ್ರಾ.ಪಂ.ಗೆ 3-4 ಬಾರಿ ಮನವಿ ಮಾಡಿದ್ದೆವು.

ನಮ್ಮ ಮನವಿಗೆ ಯಾರೂ ಸ್ಪಂದಿಸದಿದ್ದಾಗ ನಾವು ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಿ, ಮತದಾನದಿಂದ ದೂರ ಉಳಿಯುವುದಾಗಿ ಹರಿಹರ ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದ್ದೆವು ಎಂದು ಹಳ್ಳಿಹಾಳ್ ಮಟ್ಟಿ ಕ್ಯಾಂಪ್ ಗ್ರಾಮಸ್ಥರು ಮಂಗಳವಾರ ನಡೆದ ಅಧಿಕಾರಿಗಳ ವಿಚಾರಣೆ ಸಭೆಯಲ್ಲಿ ಹೇಳಿದರು.

ಈ ವೇಳೆ ಮಾತನಾಡಿದ ಜಿ.ಪಂ. ಎಇಇ ಗಿರೀಶ್ ಅವರು, ಹಳ್ಳಿಹಾಳ್ ಮಟ್ಟಿ ಕ್ಯಾಂಪ್‌ನಿಂದ ಹಳ್ಳಿಹಾಳ್‌ವರೆಗಿನ ರಸ್ತೆ ಅಭಿವೃದ್ಧಿ ಪಡಿಸುವ ಬಗ್ಗೆ 50 ಲಕ್ಷ ರೂ. ಅನುದಾನ ನೀಡುವಂತೆ ಯೋಜನೆ ಸಿದ್ದಪಡಿಸಿ, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದೇವೆ. ಚುನಾವಣೆ ನಂತರ ಮಂಜೂರಾತಿ ಸಿಗುವ ವಿಶ್ವಾಸವಿದೆ ಎಂದು ಗಿರೀಶ್ ಹೇಳಿದರು.

ತಾ.ಪಂ. ಇಓ ರಾಮಕೃಷ್ಣಪ್ಪ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲೂ ರಸ್ತೆ ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಗುರುಬಸವರಾಜ್ ಮಾತನಾಡಿ, ಮತದಾನ ನಿಮ್ಮ ಹಕ್ಕ, ಮತದಾನ ಮಾಡಿ ನೀವು ನಿಮ್ಮ ಹಕ್ಕಗಳನ್ನು ಕೇಳಬೇಕು. ಆಗ ಜನಪ್ರತಿನಿಧಿಗಳು, ಅಧಿಕಾರಿಗಳು ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಾರೆ ಎಂದು ಗ್ರಾಮಸ್ಥರಿಗೆ ಮತದಾನದ ಮಹತ್ವವನ್ನು ತಿಳಿಸಿದಾಗ ಮತದಾನ ಮಾಡಲು ಒಪ್ಪಿಗೆ ಸೂಚಿಸಿದರು. ನಂತರ ಗ್ರಾಮಸ್ಥರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿ, ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.

ಉಪತಹಶೀಲ್ದಾರ್ ಆರ್.ರವಿ, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಷರೀಫ್, ಕೊಕ್ಕನೂರು ಪಿಡಿಓ ನಾಗರಾಜ್ ಸೇರಿದಂತೆ ತಾ.ಪಂ. ಅಧಿಕಾರಿಗಳು ಸಭೆಯಲ್ಲಿದ್ದರು.

error: Content is protected !!