ದಾವಣಗೆರೆ, ಅ.23 – ಕೋವಿಡ್ ಸಾಂಕ್ರಾಮಿಕ ಹಾಗೂ ಎಚ್ಚರ ತಪ್ಪಿದರೆ ಮಾರಕ ವಾಗಬಹುದಾದ ರೋಗವಾಗಿದ್ದು, ಪ್ರತಿಯೊಬ್ಬ ನಾಗರಿಕರು ಸ್ವಯಂ ಪ್ರೇರಣೆಯಿಂದ ಕೋವಿಡ್-19 ಗಂಟಲು ಮಾದರಿ ಪರೀಕ್ಷೆ ಮಾಡಿಸಿ ಕೊಳ್ಳಬೇಕು. ಅತೀ ಬೇಗ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಮುಂದಾ ಗುವ ತೊಂದರೆಗಳನ್ನು ತಡೆಗಟ್ಟಬಹುದು ಎಂದು ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕೊಟ್ರೇಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಆಶ್ರಯದಲ್ಲಿ ಗುರುಭವನದಲ್ಲಿ ಇಂದು ಏರ್ಪಾಡಾಗಿದ್ದ ಉಚಿತ ಕೋವಿಡ್-19 ಗಂಟಲು ಮಾದರಿ ಪರೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಗಳು ಆದಷ್ಟು ಶೀಘ್ರ ಪ್ರಾರಂಭ ವಾಗುವ ಸಂಭವ ಇರುವುದರಿಂದ ಪ್ರತಿಯೊಬ್ಬ ಶಿಕ್ಷಕರೂ ಕೋವಿಡ್ ತಪಾಸಣೆ ಮಾಡಿಸಿಕೊಳ್ಳ ಬೇಕು. ಶಾಲಾ ವಿದ್ಯಾರ್ಥಿಗಳಿಗೆ ಇದರ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ನೀಡುವುದು ಅತೀ ಮುಖ್ಯವಾಗಿದೆ ಎಂದು ತಿಳಿಸಿದರು.
ಈಗಾಗಲೇ ನಗರದ ವ್ಯಾಪ್ತಿಯಲ್ಲಿ ಬರುವ ನಿಟ್ಟುವಳ್ಳಿ ಇ.ಎಸ್.ಐ ಆಸ್ಪತ್ರೆ ಮುಂಭಾಗ, ವಿದ್ಯಾನಗರ ಕೆನರಾ ಬ್ಯಾಂಕ್ ಎದುರು, ಸೂಪರ್ ಮಾರ್ಕೆಟ್ ದಾವಣಗೆರೆ ಒನ್ ಬಳಿ, ಸರ್ಕಾರಿ ನೌಕರರ ಭವನ ಹಾಗೂ ಇತರೆ ಹಲವಾರು ನಿಗದಿತ ಸ್ಥಳಗಳಲ್ಲಿ ಉಚಿತ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದರು.
ತಾಲ್ಲೂಕು ಕ್ಷೇತ್ರದ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್. ಉಮಾಪತಿ ಮಾತನಾಡಿ, ಕೋವಿಡ್ ಸೋಂಕು ಬಗ್ಗೆ ಯಾವುದೇ ರೀತಿಯ ಭಯಬೇಡ ಎಚ್ಚರಿಕೆ ಮುಖ್ಯವಾಗಿರುತ್ತದೆ. ಪ್ರಾಥಮಿಕ ಹಂತದಲ್ಲಿ ಪರೀಕ್ಷಿಸಿಕೊಳ್ಳುವುದರಿಂದ ಕಾಯಿಲೆಯನ್ನು ಬೇಗ ಪತ್ತೆಹಚ್ಚಿ ಮುಂದಾಗುವ ಗಂಡಾಂತರದಿಂದ ತಪ್ಪಿಸಿಕೊಳ್ಳಬಹುದು. ಪ್ರತಿಯೊಬ್ಬರೂ ಸಾಬೂನಿನಿಂದ ಕೈ, ಕಾಲುಗಳನ್ನು ತೊಳೆಯುವುದರಿಂದ, ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡುವುದು, ಸ್ಯಾನಿಟೈಜರ್ ಉಪಯೋಗಿಸುವುದು, ಸಭೆ- ಸಮಾರಂಭಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದರಿಂದ ರೋಗವನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾ ಧಿಕಾರಿ ಶ್ರೀನಿವಾಸ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಗಾಯಿತ್ರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅವಿನಾಶ್, ಆರೋಗ್ಯ ಸಹಾಯಕ ಆನಂದ ಮೂರ್ತಿ ಮತ್ತಿತರರು ಹಾಜರಿದ್ದರು.