ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜ್ ಹವಾಲ್ದಾರ್ ಆಶಯ
ದಾವಣಗೆರೆ, ಅ.4- ಬೇಡಿಕೆಯಂತೆ ನಾಯಕ ಸಮುದಾಯಕ್ಕೆ ಶೇ.7.5ರ ಮೀಸಲಾತಿಯನ್ನು ನಮ್ಮ ಪಕ್ಷ ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲೇ ಕಲ್ಪಿಸಬೇಕು ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜ್ ಹವಾಲ್ದಾರ್ ಆಶಿಸಿದರು.
ಅವರು, ಇಂದು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಎಸ್ಟಿ ಮೋರ್ಚಾ ಹಾಗೂ ಮಂಡಲ ಎಸ್ಟಿ ಮೋರ್ಚಾ ಪದಾಧಿಕಾರಿಗಳ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿದರು.
ನಾಯಕ ಸಮುದಾಯಕ್ಕೆ ಶೇ.7.5ರ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಮನವಿ ಮಾಡಲಾಗಿದೆ. ಎಸ್ಟಿ ಮೀಸಲಾತಿ ಹೆಚ್ಚಳಕ್ಕಾಗಿ ನ್ಯಾ. ನಾಗಮೋಹನದಾಸ್ ನೇತೃತ್ವದ ಸಮಿತಿ ನೀಡಿದ ವರದಿ ಸಂಪುಟ ಸಭೆಯ ಚರ್ಚೆಗೆ ಬರಬೇಕಿದೆ. ಸಮಿತಿ ರಚನೆಗೆ ಬಿಜೆಪಿ ಪ್ರೋತ್ಸಾಹಿಸಿತ್ತು. ಅಂತೆಯೇ ವರದಿ ಜಾರಿಗೂ ನಮ್ಮ ಪಕ್ಷದ ಸರ್ಕಾರವೇ ಮುಂದಾಗಬೇಕಿದೆ ಎಂದು ತಿಳಿಸಿದರು.
ನಾಯಕ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯ ಕಲ್ಪಿಸಿದ್ದೇ ಬಿಜೆಪಿ ಸರ್ಕಾರ. ಸಮಾಜದ ಮೂವರಿಗೆ ಪ್ರಮುಖ ಖಾತೆ ನೀಡಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಕಲ್ಪಿಸಿದ ಕೀರ್ತಿ ಸಿಎಂ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಬಿಜೆಪಿ ಪಕ್ಷವು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸರಳ ಬಹುಮತ ಸಾಧಿಸಲು ಸಾಧ್ಯವಾಗದೇ, ಅನ್ಯ ಪಕ್ಷದ ಶಾಸಕರು ಬಿಜೆಪಿಗೆ ಬಂದಿದ್ದರಿಂದ ತಾಂತ್ರಿಕ ತೊಡಕಾಗಿ ನಮ್ಮ ಸಮುದಾಯದ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಕೈ ತಪ್ಪಿತು. ಆದರೆ ಅವರಿಗೆ ಆ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತದ ಶಕ್ತಿಯಿಂದ ದೇಶದ ಚರಿಷ್ಮವೇ ಬದಲಾಗಿದೆ. ಮೋದಿ ಅವರಿಗೆ ವೀಸಾ ನೀಡಲು ನಿರಾಕರಿಸಿದ್ದ ಅಮೆರಿಕಾ ಇದೀಗ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅವರ ಹೆಸರನ್ನೇ ಬಳಕೆ ಮಾಡುತ್ತಿದೆ. ಮೋದಿ ಅವರ ಹತ್ತು ವರ್ಷಗಳ ಅವಧಿ ವಿಜಯನಗರ ಕಾಲದಷ್ಟೆ ಸುವರ್ಣ ಯುಗವಾಗಿದೆ ಎಂದು ಬಣ್ಣಿಸಿದರು.
ಎಲ್ಲ ಮಂಡಲಗಳಿಗೂ ಪ್ರವಾಸ ಮಾಡಿ ಸಭೆಗಳನ್ನು ನಡೆಸಿ ಮೋರ್ಚಾದ ಕಾರ್ಯಕರ್ತರನ್ನು ಹುರಿದುಂಬಿಸುವಂತೆ ಎಸ್ಟಿ ಮೋರ್ಚಾ ಅಧ್ಯಕ್ಷರಿಗೆ ಸಲಹೇ ನೀಡಿದರಲ್ಲದೇ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನು ಪ್ರತಿ ಮನೆಗೂ ಮುಟ್ಟಿಸುವಂತೆ ಮೋರ್ಚಾ ಕಾರ್ಯಕರ್ತರಿಗೆ ಕರೆ ನೀಡಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಒತ್ತಾಯದ ಮೇರೆಗೆ ನಿಗಮದ ಅಧ್ಯಕ್ಷ ಸ್ಥಾನದ ಹೊಣೆ ಹೊತ್ತಿರುವೆ. ನಿಗಮಕ್ಕೆ ಸರ್ಕಾರ ಪ್ರತಿ ವರ್ಷ 250 ಕೋಟಿ ರೂ. ನೀಡುತ್ತಿತ್ತು. ಈ ಬಾರಿ 400 ಕೋಟಿ ರೂ.ಗಳ ಬಜೆಟ್ ನೀಡಲಾಗಿದ್ದು, ಇದನ್ನು ಸಮರ್ಪಕವಾಗಿ ಬಳಸಿ ಸಮುದಾಯದ ಒಳಿತಿಗೆ ಒತ್ತು ನೀಡಲಾಗುವುದು ಎಂದರು.
ಮುಂದಿನ 2 ತಿಂಗಳಲ್ಲಿ ಜಗಳೂರು ತಾಲೂಕನ್ನು ದಾವಣಗೆರೆಗಿಂತಲ್ಲೂ ಅಭಿವೃದ್ಧಿಪಡಿಸಲಿದ್ದೇನೆ. 57 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ವರ್ಷಾಂತ್ಯದೊಳಗೆ ಶತಾಯಗತಾಯ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ನಾನು ಈ ಉನ್ನತ ಸ್ಥಾನ ಕಾಣಲು ಸಮುದಾಯದ ಬಲವೇ ಕಾರಣ. ಆದ್ದರಿಂದ ಶೇ. 7.5ರ ಮೀಸಲಾತಿ ವಿಚಾರವಾಗಿ ಸಮುದಾಯದ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದು, ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಂದಿಸುವ ವಿಶ್ವಾಸವಿದೆ. ಶೀಘ್ರವೇ ಎಸ್ಟಿ ಸಮಾವೇಶ ಮಾಡೋಣವೆಂದರು.
ಪಕ್ಷದ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಕೃಷ್ಣಕುಮಾರ್ ತ್ಯಾವಣಗಿ ಮಾತನಾಡಿದರು.
ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವೀರೇಂದ್ರ ಸಿಂಹ ಹರ್ತಿಕೋಟೆ, ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನರಸಿಂಹನಾಯಕ, ಮಂಜುನಾಥ ಓಲೆಕಾರ್, ಶಿವಕುಮಾರ್, ದುರುಗೇಶ್, ಜಿಪಂ ಸದಸ್ಯ ಲೋಕೇಶ್ವರ್ ಸೇರಿದಂತೆ ಇತರರು ಇದ್ದರು.