ದಾವಣಗೆರೆ, ಅ.4- ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಸಮರ್ಪಿಸಲಿರುವ ಬೆಳ್ಳಿ ಇಟ್ಟಿಗೆಯನ್ನು ನಾಡಿದ್ದು ದಿನಾಂಕ 6 ರ ಮಂಗಳವಾರ ನಗರದ ಶ್ರೀ ವೆಂಕಟೇಶ್ವರ ವೃತ್ತದಲ್ಲಿ ಸ್ವಾಗತಿಸಲಾಗುವುದು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದ್ದಾರೆ.
ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1990ರ ಅಕ್ಟೋಬರ್ 6 ರಂದು ಎಲ್.ಕೆ. ಅಡ್ವಾಣಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಚಾರದಲ್ಲಿ ನಡೆದ ರಥಯಾತ್ರೆ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಸುಮಾರು 8 ಜನರು ಹುತಾತ್ಮರಾಗಿ ನೂರಾರು ಜನರು ಗಾಯಗೊಂಡ ಕರ ಸೇವಕರ ಕನಸು ಇಂದು ನನಸಾಗಿದೆ ಎಂದು ಅವರು ಹೇಳಿದರು.
ಹುತಾತ್ಮರಾದ 8 ಜನರ ಸ್ಮರಣೆಗಾಗಿ ಸುಮಾರು 11 ಲಕ್ಷ ರೂ.ಗಳ ವೆಚ್ಚದಲ್ಲಿ 15 ಕೆ.ಜಿ. ತೂಕದ ಬೆಳ್ಳಿ ಇಟ್ಟಿಗೆಯನ್ನು ಅಯೋಧ್ಯೆಗೆ ಕಳುಹಿಸಿಕೊಡಲಾಗುವುದು. ಈ ಇಟ್ಟಿಗೆಯಲ್ಲಿ ಶ್ರೀರಾಮನ ಹಾಗೂ ಮಂದಿರದ ಚಿತ್ರವಿದೆ. ಹಿಂಭಾಗದಲ್ಲಿ ಹುತಾತ್ಮರಾದ 8 ಜನರ ಹೆಸರುಗಳನ್ನು ಬರೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ನಾಡಿದ್ದು ಮಂಗಳವಾರ ಬೆಳಿಗ್ಗೆ 10.30ಕ್ಕೆ ವೆಂಕಟೇಶ್ವರ ವೃತ್ತದಲ್ಲಿ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀರಾಮ ರಥದಲ್ಲಿ ಬೆಳ್ಳಿ ಇಟ್ಟಿಗೆ ಇರಿಸಿ ಪುಷ್ಪಾರ್ಚನೆ ಮಾಡಿ, ಪ್ರಮುಖ ರಸ್ತೆಗಳಲ್ಲಿ ಎಲ್ಲಾ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬೈಕ್ ರಾಲಿ ಮೂಲಕ ಪಿ.ಜೆ. ಬಡಾವಣೆಯಲ್ಲಿರುವ ಶ್ರೀರಾಮ ಮಂದಿರಕ್ಕೆ ತಂದು ಪೂಜೆ ಸಲ್ಲಿಸಲಾಗುವುದು.
ಮುಂದಿನ ದಿನಗಳಲ್ಲಿ ಹುತಾತ್ಮರಾದ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಬೆಳ್ಳಿ ಡಾಲರ್ ನೀಡಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಯಶವಂತರಾವ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ, ಶಿವಪ್ರಕಾಶ್, ಶಿವನಗೌಡ ಪಾಟೀಲ, ಸ್ವಾಗಿ ಶಾಂತಕುಮಾರ್ ಹಾಗೂ ಟಿಂಕರ್ ಮಂಜಣ್ಣ ಉಪಸ್ಥಿತರಿದ್ದರು.