ಹರಿಹರ ನಗರಸಭೆಯಲ್ಲಿ ಕಡತಗಳನ್ನಿಡಲು ಸ್ಥಳದ ಕೊರತೆ

ನೂತನ ಕಟ್ಟಡದ ಕನಸು ನನಸಾಗುವುದೆಂದು?

ಹರಿಹರ, ಆ. 4 – ಇಲ್ಲಿನ ನಗರಸಭೆ ಇದೀಗ ಕಡತಗಳ ಶೇಖರಣೆಗೆ ಸ್ಥಳದ ಕೊರತೆ ಎದುರಿಸುತ್ತಿದೆ.  ಎಲ್ಲಿ ಬೇಕೆಂದರಲ್ಲಿ ಕಡತಗಳನ್ನು ಇಟ್ಟುಕೊಂಡು ಸಿಬ್ಬಂದಿಗಳು ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. 

ಡಿಜಿಟಲ್ ಯುಗದಲ್ಲಿ,  ಪೇಪರ್ ಲೆಸ್ ಕಚೇರಿಗಳು ಹೆಚ್ಚಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಈ ನಗರಸಭೆ  ಮಾತ್ರ ಬಂದವರಿಗೆ ಕಡತಗಳ ರಾಶಿಯ ದರುಶನ ಮಾಡಿಸುತ್ತಿದೆ.

ನಗರದ  ಜನಸಂಖ್ಯೆಗೆ ತಕ್ಕಂತೆ ನೂತನ ಕಟ್ಟಡದ ಅವಶ್ಯಕತೆ ಇದೆ. ಆದರೆ ಕಟ್ಟಡ ನಿರ್ಮಾಣ ಇನ್ನೂ ಕಾರ್ಯ ರೂಪಕ್ಕೆ ಬಂದಿಲ್ಲ.

ನಗರದಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ಜನರು ಇಲ್ಲಿ ವಾಸಿಸುತ್ತಿದ್ದಾರೆ. 31 ವಾರ್ಡ್‌ ಗಳಿವೆ. ಇಲ್ಲಿನ ಜನತೆಗೆ ಬಹಳ ಅವಶ್ಯಕತೆಗಳಾದ ಕುಡಿಯುವ ನೀರು, ವಿದ್ಯುತ್ ದೀಪ, ಚರಂಡಿ ಸ್ವಚ್ಚತೆ, ರಸ್ತೆ ಸೇರಿದಂತೆ ಪ್ರಮುಖ ಸೌಲಭ್ಯಗಳನ್ನು ಪೂರೈಸುವಲ್ಲಿ ನಗರಸಭೆಯ ಪಾತ್ರ ಬಹು ಮುಖ್ಯವಾಗಿದೆ. 

ಜನನ, ಮರಣ, ಖಾತೆ ಎಕ್ಸ್‌ಟ್ರ್ಯಾಕ್ಟ್, ಮನೆ ಕಟ್ಟಲು ಲೈಸೆನ್ಸ್, ಹಲವಾರು ದಾಖಲೆಗಳನ್ನು ಇಲ್ಲಿಂದಲೇ ಪಡೆಯಬೇಕಾಗುತ್ತದೆ. ಇದಕ್ಕೆ ತಕ್ಕಂತೆ ನಗರಸಭೆಯಲ್ಲಿ ಆರೋಗ್ಯ ಶಾಖೆ, ಇಂಜಿನಿಯರ್ ಶಾಖೆ, ಕಡತಗಳ ಶಾಖೆ, ಲೆಕ್ಕಪರಿಶೋಧಕರ ಶಾಖೆ ಹೀಗೆ ಹಲವು ಶಾಖೆಗಳು ಕಾರ್ಯ ನಿರ್ವಹಿಸುತ್ತವೆ. ಇದರಿಂದಾಗಿ ನಗರಸಭೆಗೆ ನಿತ್ಯ ಸಾವಿರಾರು ಸಾರ್ವಜನಿಕರು ನಗರಸಭೆಗೆ ಆಗಮಿಸುತ್ತಾರೆ.

ಪ್ರಸ್ತುತ ಕಟ್ಟಡವು ಬಹುತೇಕ ಶಿಥಿಲಗೊಂಡಿದೆ. ಇರುವ ಚಿಕ್ಕ ಗೋಡೆಗಳು ಯಾವ ಸಮಯದಲ್ಲಿ ಬೀಳುತ್ತವೆಯೋ ಎನ್ನುವ ಜಿಜ್ಞಾಸೆ ನೌಕರರನ್ನು ಕಾಡುತ್ತಿದೆ.  ಪ್ರಮುಖ  ಕಡತಗಳನ್ನು ಸುರಕ್ಷಿತವಾಗಿ ಶೇಖರಣೆ ಮಾಡಿಡಲು  ಆವರಣದಲ್ಲಿ ಸ್ಥಳದ ಕೊರತೆ ಬಹಳ ದೊಡ್ಡ ಪ್ರಮಾಣದಲ್ಲಿ ಕಾಡುತ್ತಿದೆ.

ಇದರಿಂದಾಗಿ  ಕಡತಗಳನ್ನು ಓಡಾಡುವ ಸ್ಥಳದಲ್ಲಿಯೇ ಇಟ್ಟುಕೊಂಡು ಕಾರ್ಯವನ್ನು ನಿರ್ವಹಿಸುವುದು ಇಲ್ಲಿನ ಅನಿವಾರ್ಯವಾಗಿದೆ. ಅಷ್ಟೇ ಅಲ್ಲ, ದಿನನಿತ್ಯ ಇಲ್ಲಿಗೆ ಬರುವ ಸಾರ್ವಜನಿಕರಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಆಸನಗಳ ವ್ಯವಸ್ಥೆ ಸಹ ಸಮರ್ಪಕವಾಗಿಲ್ಲ.

ಸದ್ಯ ಇರುವ ಕಟ್ಟಡ ತೆರವುಗೊಳಿಸಿ ಸುಂದರ ಮತ್ತು ಸುಸಜ್ಜಿತ  ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆ ಕೂಡ ತಯಾರಿಸಲಾಗಿದೆ ಮತ್ತು ಅದಕ್ಕೆ ಬೇಕಾದ ಹಣವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಪರಿಣಾಮವಾಗಿ ಕಳೆದ ಒಂದು ವರ್ಷದ ಹಿಂದೆ ಎಸ್.ಎಫ್. ಸಿ ಅನುದಾನದಲ್ಲಿ 5.90 ಕೋಟಿ ರೂ. ಹಣ ಕೂಡ ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಮೊದಲ ಕಂತಿನಲ್ಲಿ  ಒಂದು ಕೋಟಿ  ರೂ.ಗಳನ್ನು ಸರ್ಕಾರ ನೀಡಿದೆ. ಆದರೆ ನೂತನ ಕಟ್ಟಡ ಕೆಲಸವನ್ನು ಪ್ರಾರಂಭ ಮಾಡದೇ ಇರುವುದಕ್ಕೆ ಕಾರಣ ಏನು ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.

ನಗರಸಭೆ ಚುನಾಯಿತ ಸದಸ್ಯರು ಇನ್ನೂ ಅಧಿಕಾರ ಸ್ವೀಕರಿಸದ ಕಾರಣದಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಯವರು ನಗರಸಭೆ ಆಡಳಿತಾಧಿಕಾರಿಯಾಗಿರುವುದರಿಂದ ಆದಷ್ಟು ಬೇಗನೆ ನೂತನ ಕಟ್ಟಡದ ಕೆಲಸವನ್ನು ಪ್ರಾರಂಭಿಸಬೇಕು ಎಂದು ಇಲ್ಲಿನ ಜನತೆಯ ಆಗ್ರಹವಾಗಿದೆ.

error: Content is protected !!