ಪ್ರಿಟೋರಿಯ ನ. 28 – ಕೊರೊನಾ ರೂಪಾಂತರಿಯಾದ ಓಮಿಕ್ರಾನ್ ಸೋಂಕಿನ ಲಕ್ಷಣಗಳು ಡೆಲ್ಟಾ ರೀತಿಯಲ್ಲಿ ಇಲ್ಲ. ರೋಗ ಲಕ್ಷಣಗಳು ಕಡಿಮೆ ಪ್ರಮಾಣದಲ್ಲಿವೆ ಎಂದು ದಕ್ಷಿಣ ಆಫ್ರಿಕಾದ ವೈದ್ಯರೊಬ್ಬರು ತಿಳಿಸಿದ್ದಾರೆ.
ನೂತನ ರೂಪಾಂತರಿ ಸೋಂಕಿಗೆ ಸಿಲುಕಿದ 30ರಷ್ಟುಜನರನ್ನು ಕಳೆದ 10 ದಿನಗಳಲ್ಲಿ ನೋಡಿದ್ದೇನೆ. ಅವರಲ್ಲಿ ಗಂಟಲು ಕೆರೆತ ಹಾಗೂ ಒಣ ಕೆಮ್ಮು ಮತ್ತು ಸ್ವಲ್ಪ ಪ್ರಮಾಣ ಮೈ – ಕೈ ನೋವು ಇತ್ತು ಎಂದು ದಕ್ಷಿಣ ಆಫ್ರಿಕಾದ ವೈದ್ಯಕೀಯ ಒಕ್ಕೂಟದ ಅಧ್ಯಕ್ಷರಾದ ಏಂಜಲಿಕ್ ಕೊಯಿಟ್ಜ್ ಹೇಳಿದ್ದಾರೆ.
ಇತರೆ ರೂಪಾಂತರಿಗಳಲ್ಲಿ ಸೋಂಕು ತೀವ್ರವಾಗಿರುತ್ತದೆ. ಆದರೆ, ಹೊಸ ರೂಪಾಂತರಿಯಲ್ಲಿ ಲಕ್ಷಣಗಳು ಕಡಿಮೆ ಇವೆ. ಸೋಂಕಿನ ಸ್ವರೂಪ ಡೆಲ್ಟಾ ರೀತಿ ಇಲ್ಲ ಎಂದು ಕೋಯಿಟ್ಜ್ ಹೇಳಿದ್ದಾರೆ.
ಇನ್ನಷ್ಟು ದೇಶಗಳಲ್ಲಿ ಓಮಿಕ್ರಾನ್ ವೈರಸ್ ರೂಪಾಂತರಿ
ಲಂಡನ್, ನ. 28 – ಓಮಿಕ್ರಾನ್ ಕೊರೊನಾ ವೈರಸ್ ರೂಪಾಂತರಿ ಯುರೋಪಿನ ಇನ್ನೂ ಹಲವು ದೇಶಗಳಲ್ಲಿ ಕಂಡು ಬಂದಿದೆ. ಜರ್ಮನಿ ಹಾಗೂ ಇಟಲಿಗಳಲ್ಲಿ ಹೊಸ ಸೋಂಕಿತರು ಕಂಡು ಬಂದಿದ್ದಾರೆ.
ಬೆಲ್ಜಿಯಂ, ಇಸ್ರೇಲ್ ಹಾಗೂ ಹಾಂಕಾಂಗ್ಗಳಿಗೆ ಬಂದ ಪ್ರವಾಸಿಗರಲ್ಲೂ ಈ ಸೋಂಕಿತರು ಕಂಡು ಬಂದಿದ್ದಾರೆ. ಅಮೆರಿಕದಲ್ಲಿ ಈಗಾಗಲೇ ಓಮಿಕ್ರಾನ್ ರೂಪಾಂತರಿ ಬಂದಿದ್ದರೆ ಅಚ್ಚರ ಪಡಬೇಕಿಲ್ಲ ಎಂದು ಅಲ್ಲಿನ ಸೋಂಕು ರೋಗ ಪರಿಣಿತ ಡಾ. ಆಂಥೊನಿ ಫಾಕಿ ಹೇಳಿದ್ದಾರೆ. ಬ್ರಿಟನ್ನ ಇಬ್ಬರಲ್ಲಿ ಓಮಿಕ್ರಾನ್ ಸೋಂಕು ಕಂಡು ಬಂದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ.
ಜಿಲ್ಲೆಯಲ್ಲಿ ಓಮಿಕ್ರಾನ್ ರೂಪಾಂತರ ಕೊರೊನಾ ಪತ್ತೆಯಾಗಿಲ್ಲ : ಡಿಸಿ
ದಾವಣಗೆರೆ, ನ.28- ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಜಿಲ್ಲಾದ್ಯಂತ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂ ಡಿದ್ದು, ಅಂತರರಾಷ್ಟ್ರೀಯ ಪ್ರವಾಸ, ಅನ್ಯ ರಾಜ್ಯಗಳ ಪ್ರವಾಸ ಮಾಡಿ ಬಂದವರು, ಅನ್ಯ ರಾಜ್ಯದಿಂದ ಬಂದ ವಿದ್ಯಾರ್ಥಿಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿ ಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿನ 2-3 ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶೇಷವಾಗಿ ಕೇರಳ, ಮಹಾರಾಷ್ಟ್ರ ಸೇರಿದಂತೆ, ಅನ್ಯ ರಾಜ್ಯಗಳಿಂದ ಬಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ವಿದೇಶ, ಅನ್ಯ ರಾಜ್ಯಗಳ ಪ್ರವಾಸ ಮಾಡಿ ಬಂದವರನ್ನು ಕಡ್ಡಾಯವಾಗಿ ಟೆಸ್ಟ್ ಮಾಡಿಸಲು ಸರ್ಕಾರದ ನಿರ್ದೇಶನ ಬಂದಿದ್ದು, ಜಿಲ್ಲಾಡಳಿತವೂ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ವಹಿಸಿದೆ ಎಂದರು.
ಸದ್ಯಕ್ಕೆ ಜಿಲ್ಲೆಯಲ್ಲಿ ಕೊರೊನಾ ಬಗ್ಗೆಯಾಗಲೀ, ಓಮಿಕ್ರಾನ್ ಹೊಸ ರೂಪಾಂತರಿ ಕೊರೊನಾ ತಳಿ ವೈರಸ್ ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಭಯದ ವಾತಾವರಣ ಸಹ ಇಲ್ಲ. ಆದರೂ, ನಾವ್ಯಾರೂ ಮೈಮರೆಯಬಾರದು. ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್ ಸೇರಿದಂತೆ ನಾನಾ ಕಾಲೇಜುಗಳು ಇಲ್ಲಿವೆ. ದೇಶ, ವಿದೇಶಗಳಿಂದಲೂ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ಅಂತಹ ಎಲ್ಲಾ ವಿದ್ಯಾರ್ಥಿಗಳ ಮೇಲೆ ಸರ್ವೇಕ್ಷಣಾ ಇಲಾಖೆ ನಿಗಾ ಇಡಲಿದೆ ಎಂದರು.
ಶಾಲಾ – ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ನಿಷೇಧ
ಬೆಂಗಳೂರು, ನ. 28 – ಧಾರವಾಡ, ಬೆಂಗಳೂರು ಸೇರಿದಂತೆ ಹಲವೆಡೆ ಶಿಕ್ಷಣ ಸಂಸ್ಥೆಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಶಾಲಾ – ಕಾಲೇಜುಗಳಲ್ಲಿ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮುಂದೂಡುವಂತೆ ಆರೋಗ್ಯ ಇಲಾಖೆ ತಿಳಿಸಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಸಮ್ಮೇಳನ, ವಿಚಾರ ಸಂಕಿರಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಬೇಕಿದ್ದರೆ ಸೀಮಿತ ಜನರಿಗೆ ಅವಕಾಶ ನೀಡಬೇಕು. ಆನ್ಲೈನ್ ಮೂಲಕ ಕಾರ್ಯಕ್ರಮ ಪ್ರಸಾರ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಕೋಯಿಟ್ಜ್ ಹೊಸ ರೀತಿಯ ಸೋಂಕಿನ ಬಗ್ಗೆ ಮಾಹಿತಿ ನೀಡಿದ ನಂತರ ಪರೀಕ್ಷೆ ನಡೆಸಿದಾಗ ರೂಪಾಂತರಿ ಪತ್ತೆಯಾಗಿತ್ತು.
ರೂಪಾಂತರಿ ಅತ್ಯಂತ ಅಪಾಯಕಾರಿ ಎಂದು ಪ್ರಚಾರ ಮಾಡಿರುವುದು ದುರಾದೃಷ್ಟಕರ. ರೂಪಾಂತರಿ ತೀವ್ರ ಸ್ವರೂಪದ್ದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದವರು ಹೇಳಿದ್ದಾರೆ.
ಈ ರೋಗ ತೀವ್ರ ಸ್ವರೂಪದ್ದಾಗುವುದಿಲ್ಲ ಎಂದು ಈಗಲೇ ಹೇಳಲಾಗದು. ಆದರೆ, ಲಸಿಕೆ ಪಡೆಯದವರಲ್ಲೂ ಲಕ್ಷಣಗಳು ಸಣ್ಣ ಮಟ್ಟದ್ದಾಗಿದೆ. ಯುರೋಪಿನ ಸಾಕಷ್ಟು ಜನರಲ್ಲಿ ಈ ವೈರಸ್ ಸೋಂಕು ಬಂದಿರಬಹುದು ಎಂದು ನನಗೆ ಅನ್ನಿಸುತ್ತಿದೆ ಎಂದೂ ಕೋಯಿಟ್ಜ್ ಹೇಳಿದ್ದಾರೆ.