ಪುರುಷರ ಅನುಕರಣೆ ಬೇಡ, ವಿದ್ರೋಹಿಗಳಾಗಿ

‘ಜನತಾವಾಣಿ’ ಸಹಯೋಗದಲ್ಲಿ ‘ಜಿಲ್ಲಾ ವನಿತಾ ಸಾಹಿತ್ಯ ಶ್ರೀ’ ಪ್ರಶಸ್ತಿ ಪ್ರದಾನ

ಲೇಖಕಿಯರಿಗೆ ಹಂಪಿ ವಿ.ವಿ. ಮಹಿಳಾ ಅಧ್ಯಯನ ವಿಭಾಗದ ನಿರ್ದೇಶಕಿ ಡಾ. ಶೈಲಜಾ ಹಿರೇಮಠ್ ಕರೆ

ದಾವಣಗೆರೆ, ನ. 28 – ಮಹಿಳೆಗೆ ಸಾಹಿತ್ಯ ರಚಿಸಲು ಆಗುವುದಿಲ್ಲ, ಮಹಿಳೆಯರ ಸಾಹಿತ್ಯ ಎರಡನೇ ದರ್ಜೆಯದು, ಸಾಹಿತ್ಯದಲ್ಲಿ ತೊಡಗುವ ಮಹಿಳೆ ಕೀಳೆಂದು ಬಿಂಬಿಸುವುದು ಇತಿಹಾಸ ದುದ್ದಕ್ಕೂ ಹಲವಾರು ಸಮಾಜಗಳಲ್ಲಿ ಕಂಡು ಬರುತ್ತದೆ ಎಂದು ಹಂಪಿ ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಶೈಲಜಾ ಹಿರೇಮಠ್ ಹೇಳಿದ್ದಾರೆ.

`ಜನತಾವಾಣಿ’ ದಿನಪತ್ರಿಕೆ ಸಹಯೋಗ ದೊಂದಿಗೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಇಂದು ಆಯೋಜಿಸಲಾಗಿದ್ದ 66ನೇ ಕನ್ನಡ ರಾಜ್ಯೋತ್ಸವ, ವೇದಿಕೆಯ 27ನೇ ವಾರ್ಷಿಕೋತ್ಸವ, ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ  ಪಾಲ್ಗೊಂಡು ಅವರು ಮಾತನಾಡಿದರು.

ವಿಲಿಯಂ ಷೇಕ್ಸ್‌ಪಿಯರ್ ಸಹೋದರಿ ಜುಡಿತ್‌ಗೆ ಓದುವ ಆಸಕ್ತಿ ಇದ್ದರೂ ಪ್ರೋತ್ಸಾಹ ಸಿಗಲಿಲ್ಲ. ಲೇಖಕಿ ರಶೀದ್ ಜಹಾನ್ ಅವರು ಬರವಣಿಗೆಯಿಂದಾಗಿ ಬೆದರಿಕೆ ಎದುರಿಸಿದರು. ಇವರಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಹಿಳೆ ಯರು ಎದುರಿಸಿದ ಸಮಸ್ಯೆ ಕಡಿಮೆ ಎಂದರು.

ಇಷ್ಟಾದರೂ, ಕನ್ನಡದ ತ್ರಿವೇಣಿ, ಸಾಯಿಸುತೆ ಮತ್ತಿತರರ ಕೃತಿಗಳನ್ನು §ಜನಪ್ರಿಯ ಸಾಹಿತ್ಯ¬ ಎಂದು ಎರಡನೇ ದರ್ಜೆಯಂತೆ ಬಿಂಬಿಸಲಾಯಿತು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅಂಥವರೇ ಮಹಿಳೆಯರು §ಅಡುಗೆ ಮನೆ ಸಾಹಿತ್ಯ¬ ರಚಿಸುವವರು ಎಂದು ಕಡೆಗಣಿಸಿದರು. ಆದರೆ, ಇಂಥವರಿಗೆ ತಕ್ಕ ಉತ್ತರ ನೀಡಿದ ಸಾಹಿತಿ ಶ್ಯಾಮಲಾ ದೇವಿ ಅವರು, §ಕಲೆ ನಮಗಿರಲಿ – ಶಾಸ್ತ್ರ ಅವರಿಗಿರಲಿ¬ ಎಂದು ಸವಾಲೆಸೆದರು ಎಂದು ಹಿರೇಮಠ್ ತಿಳಿಸಿದರು.

ಮಹಿಳೆಯರು ಸಾಹಿತ್ಯ ಲೋಕದಲ್ಲಿ ವಿದ್ರೋಹಿಗಳಾಗುವ ಅಗತ್ಯವಿದೆ. ಪುರುಷರಂತೆ ಸಾಹಿತ್ಯ ರಚಿಸುವ ಅನುಕರಣೆ ಮಾಡುವುದು ಎಂದರೆ ಕಾಲಿಗೆ ಕಲ್ಲು ಕಟ್ಟಿಕೊಂಡಂತೆ. ತಮ್ಮದೇ ಆದ ಶೈಲಿಯಲ್ಲಿ ಬರವಣಿಗೆಯಲ್ಲಿ ತೊಡಗಬೇಕು ಎಂದವರು ಕಿವಿಮಾತು ಹೇಳಿದರು.

ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗರಾಜ್, ವನಿತಾ ಸಮಾಜದ ಸ್ಥಾಪಕರಾದ ಡಾ. ಸಿ. ನಾಗಮ್ಮ ಕೇಶವಮೂರ್ತಿ ಅವರು 27 ವರ್ಷಗಳ ಹಿಂದೆ ಸಾಹಿತ್ಯ ವೇದಿಕೆ ಸ್ಥಾಪಿಸಿ, ಮಹಿಳೆಯರಿಗೆ ಪ್ರೋತ್ಸಾ ಹಿಸಿದರು. ಜನತಾವಾಣಿ ಪತ್ರಿಕೆಯ ಸ್ಥಾಪಕರಾದ ದಿ. ಹೆಚ್.ಎನ್. ಷಡಾಕ್ಷರಪ್ಪ ಅವರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಲೇಖಕಿಯರಿಗೆ ಪ್ರೋತ್ಸಾಹ ಕೊಡುತ್ತಿದ್ದರು. ಅವರು ತಮ್ಮ ತಾಯಿ – ತಂದೆ ಹೊನ್ನೇನಹಳ್ಳಿ ಹನುಮಕ್ಕ ಮತ್ತು ನಂಜಪ್ಪ ಮೆಳ್ಳೇಕಟ್ಟೆ ದಂಪತಿ ಹೆಸರಿನಲ್ಲಿ ಲೇಖಕಿಯರಿಗೆ ಪ್ರಶಸ್ತಿ ನೀಡುವ ಮೂಲಕ ಗೌರವಿಸುತ್ತಿದ್ದಾರೆ ಎಂದರು.

ಶಿವಮೊಗ್ಗದ ಸಾಹಿತಿ ಸವಿತಾ ನಾಗಭೂಷಣ್ ಮಾತನಾಡಿ, ಮಹಿಳೆಯರು ತಮ್ಮ ಕೆಲಸಗಳ ಒತ್ತಡದ ನಡುವೆಯೂ ಬರವಣಿಗೆಯಲ್ಲಿ ತೊಡಗುವ ಮೂಲಕ ಸಾಧನೆ ಮಾಡಿದ್ದಾರೆ. ಮಹಿಳೆಯರು ಬರೆಯಲು ತಮ್ಮದೇ ಆದ ವಿಷಯಗಳನ್ನು ಹೊಂದಿದ್ದಾರೆ. ಅವರ ಸಾಹಿತ್ಯ ಓದುವ ಮೂಲಕ ಪುರುಷರು ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.

ವೇದಿಕೆಯ ಮೇಲೆ ಶಿವಮೊಗ್ಗದ ಸಾಹಿತಿ ಸವಿತಾ ನಾಗಭೂಷಣ್‌, ಜಿಲ್ಲಾ ಕನ್ನಡ ಸಾಹಿತ್ಯ  ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, `ಜನತಾವಾಣಿ’ ಸ್ಥಾಪಕ ಸಂಪಾದಕ ದಿ. ಹೆಚ್.ಎನ್. ಷಡಾಕ್ಷರಪ್ಪ ಅವರ ಪತ್ನಿ ಶ್ರೀಮತಿ ಜಯಶೀಲಾ ಷಡಾಕ್ಷರಪ್ಪ ಉಪಸ್ಥಿತರಿದ್ದರು.

ಜ್ಯೋತಿ ಬಾದಾಮಿ ಹಾಗೂ ವೀಣಾ ಕೃಷ್ಣಮೂರ್ತಿ ಅವರಿಗೆ ಹೊನ್ನೇನಹಳ್ಳಿ ಹನುಮಕ್ಕ ನಂಜಪ್ಪ ಮೆಳ್ಳೇಕಟ್ಟೆ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಜ್ಯೋತಿ ಬಾದಾಮಿ ಅವರ  ಸವಿತಾ ಮತ್ತು  ಪರಿಕ್ರಮ ಕೈಲಾಸ ಮಾನಸ ಮಡಿಲಲ್ಲಿ, ಸುನಿತಾ ರಾಜು ಅವರ  ರಾಜಶ್ರೀ, ವೀಣಾ ಕೃಷ್ಣಮೂರ್ತಿ ಅವರ  ವಿಕೆಎಂ ದಿನದ ಚುಟುಕು, ಕೆ.ಆರ್. ಸುಮತೀಂದ್ರ ಅವರ ದರ್ಪಣ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಅರುಂಧತಿ ರಮೇಶ್ ಸ್ವಾಗತಿಸಿದರೆ, ಸುನಿತ ಪ್ರಕಾಶ್ ನಿರೂಪಿಸಿದರು.

error: Content is protected !!